ಸಾಮಾನ್ಯ ಜ್ವರ ನಿಮ್ಮನ್ನು ಕಾಡುತ್ತಿದರೆ ಇಲ್ಲಿದೆ ಕೆಲವು ಸುಲಭ ಸುಲಭ ಮನೆಮದ್ದು!

ಹಿಂದಿನ ಕಾಲದಲ್ಲಿ ಯಾವುದೇ ಅನಾರೋಗ್ಯ ಸಮಸ್ಯೆ ಆಗಿದ್ರೂ ಜನ ಮೊದಲು ಮಾಡುತ್ತಿದ್ದುದೇ ಮನೆಮದ್ದು. ಇದರಲ್ಲಿಯೇ ಆರೋಗ್ಯವೂ ಸುಧಾರಿಸುತ್ತಿತ್ತು. ಆದರೆ ಈಗ ಕಾಲ ಬದಲಾಗಿದೆ. ಯಾಉದೇ ಮೆಡಿಸಿನ್ ಇಲ್ಲದೇ ಜನರಿಗೆ ಬದುಕೋದಕ್ಕೂ ಕಷ್ಟ. ಮನೆಮದ್ದು ಮಾಡುವುದಂತೂ ಹಲವರಿಗೆ ಗೊತ್ತೇ ಇಲ್ಲ. ಆದರೆ ಎಲ್ಲದಕ್ಕೂ ವೈದ್ಯರ ಬಳಿ ಹೋಗುವುದರ ಬದಲು ಕೆಲವು ಮನೆಮದ್ದನ್ನು ಮನೆಯಲ್ಲಿಯೇ ಮಾಡಿಕೊಂಡು ಆರೋಗ್ಯ ಕಾಪಾಡಿಕೊಳ್ಳಬಹುದು.

ಉದಾಹರಣೆಗೆ ಸಾಮಾನ್ಯ ಜ್ವರ ಬಂದಾಗ ಅದಕ್ಕೂ ಮಾತ್ರೆ ನುಂಗುವ ಬದಲು ಕೆಲವು ಆಯುರ್ವೇದದಲ್ಲಿಯೂ ಹೆಳಲಾದ ಮನೆಮದ್ದನ್ನು ಮಾಡಿ ನೋಡಿ. ಎಷ್ಟು ಬೇಗ ಯಾವುದೇ ಅಡ್ಡ ಪರಿಣಾಮಗಳಿಲ್ಲದೇ ಜ್ವರ ವಾಸಿಯಾಗುತ್ತದೆ ನೋಡಿ. ಹಾಗಾದರೆ ಬನ್ನಿ ಸಾಮಾನ್ಯ ಜ್ವರವನ್ನು ಹೋಗಲಾಡಿಸುವ ಮನೆಮದ್ದುಗಳು ಯಾವವು ನೋಡೋಣ.

ತುಳಸಿ ಕುಡಿ ಮತ್ತು ಕಾಳು ಮೆಣಸು; ತುಳಸಿ ಆರೋಗ್ಯದ ಭಂಡಾರ. ಹಾಗಾಗಿ ದೇಹದ ಯಾವುದೇ ಖಾಯಿಲೆಗೆ ತುಳಸಿಯಲ್ಲಿ ಪರಿಹಾರವಿದೆ. ಮೂರು ಎಳೆಯ ತುಳಸಿ ಕುಡಿ ತೆಗೆದುಕೊಳ್ಳಿ. ಆರು ಕಾಳು ಮೆನಸನ್ನು ತೆಗೆದುಕೊಳ್ಳಿ. ಇವೆರಡೂ ವಸ್ತುಗಳನ್ನು ಒಟ್ಟಾಗಿ ಬಾಯಲ್ಲಿ ಜಗೆದು ತಿನ್ನಿ. ದಿನಕ್ಕೆ ಮೂರರಿಂದ ನಾಲ್ಕು ಬಾರಿ ಈ ರೀತಿ ಮಾಡುವುದರಿಂದ ಸುಲಭವಾಗಿ ಜ್ವರ ಕಡಿಮೆಯಾಗುತ್ತದೆ.

ಅಮೃತ ಬಳ್ಳಿ. ಇಂದು ಆಯುರ್ವೇದದಲ್ಲಿ ಹೆಚ್ಚೆಚ್ಚು ಬಳಸಲ್ಪಡುವ ಅಮೃತ ಬಳ್ಳಿ, ಹೆಸರೇ ಸೂಚಿಸುವಂತೆ ಆರೋಗ್ಯದ ವಿಷಯದಲ್ಲಿ ಅಮೃತವೇ ಸರಿ! ನಾಲ್ಕರಿಂದ ಐದು ಅಮೃತ ಬಳ್ಳಿಯ ಎಲೆ ಹಾಗೂ ಅಮೃತ ಬಳ್ಳಿಯ ತುಂಡನ್ನು ತೆಗೆದುಕೊಳ್ಳಿ. ಎರಡು ಲೋಟ ನೀರನ್ನು ಒಂದು ಪಾತ್ರೆಗೆ ಹಾಕಿ ಚೆನ್ನಾಗಿ ಕುದಿಸಿ. ನಂತರ ಅಮೃತ ಬಳ್ಳಿಯ ಎಲೆಯನ್ನು ಹಾಕಿ. ಅಮೃತ ಬಳ್ಳಿಯ ತುಂಡನ್ನೂ ಸ್ವಲ್ಪ ಜಜ್ಜಿ ಹಾಕಿ. ಎರಡು ಲೋಟ ನೀರು ಒಂದು ಲೋಟ ನೀರಿನಷ್ಟು ಆಗುವವರೆಗೆ ಕುದಿಸಿ. ನಂತರ ಕಷಾಯವನ್ನು ಒಂದು ಲೋಟಕ್ಕೆ ಸೋಸಿ. ಈ ಕಷಾಯವನ್ನು ದಿನದಲ್ಲಿ ಮೂರು ಬಾರಿ ಕುಡಿಯಿರಿ. ಇದಕ್ಕೆ ಬೇಕಿದ್ದರೆ ಸ್ವಲ್ಪ ಬೆಲ್ಲವನ್ನು ಸೇರಿಸಿ ಕುಡಿಯಬಹುದು. ಇನ್ನು ಅಮೃತ ಬಳ್ಳಿಯ ಎಲೆಯನ್ನು ಹಾಗೆಯೇ ಬಾಯಲ್ಲಿ ಜಗೆದು ತಿಂದರೂ ಕೂಡ ಆರೋಗ್ಯಕ್ಕೆ ಒಳ್ಳೆಯದೇ!

ಹಿಪ್ಪಲಿ: ಹಿಪ್ಪಲಿ ಹಾಗೂ ಬೆಲ್ಲದಿಂದ ಮಾಡುವ ಮನೆಮದ್ದು ಇದು. ಸ್ವಲ್ಪ ಹಿಪ್ಪಲಿಯನ್ನು ತೆಗೆದುಕೊಂಡು ಕುಟ್ಟಾಣಿಯಲ್ಲಿ ಕುಟ್ಟಿ ಪುಡಿಮಾಡಿಕೊಳ್ಳಿ. ಇದಕ್ಕೆ ಅರ್ಧ ಚಮಚದಷ್ಟು ಬೆಲ್ಲವನ್ನು ಹಾಕಿ ಮಿಕ್ಸ್ ಮಾಡಿ. ಇದನ್ನೂ ಕೂಡ ದಿನಕ್ಕೆ ಮೂರು ಬಾರಿ ಸೇವಿಸಿದರೆ ಜ್ವರ ಉಪಶಮನವಾಗುತ್ತದೆ. ಹಿಪ್ಪಲಿ ಯಾವುದೇ ಗ್ರಂಥಿಗೆ ಅಂಗಡಿಯಲ್ಲಿ ದೊರೆಯುತ್ತದೆ. ಇದನ್ನು ಆಯುರ್ವೇದದಲ್ಲಿ ಹೆಚ್ಚಾಗಿ ಬಳಸುವಂಥ ಗಿಡಮೂಲಿಕೆಯೂ ಆಗಿದೆ!

ಈ ಮನೆಮದ್ದುಗಳನ್ನು ಮಾಡಿದರೆ ಜ್ವರ ವಾಸಿಯಾಗುತ್ತದೆ. ಇಲ್ಲಿ ಹೇಳಿರುವ ಎಲ್ಲಾ ಮನೆಮದ್ದುಗಳನ್ನು ಮಾಡಬೇಕೆಂದಿಲ್ಲ. ಇವುಗಳಲ್ಲಿ ನಿಮಗೆ ಅನುಕೂಲವಾಗುವ ಯಾವುದಾದರೂ ಒಂದು ಮನೆಮದ್ದನ್ನು ಸರಿಯಾಗಿ ಮಾಡುತ್ತಾ ಬಂದರೆ ಜ್ವರ ವಾಸಿಯಾಗುತ್ತದೆ. ಯಾವುದೇ ಅನಾರೋಗ್ಯಕ್ಕೆ ವೈದ್ಯರ ಸಲಹೆಯೂ ಅಷ್ಟೇ ಮುಖ್ಯ. ಹಾಗಾಗಿ ವೈದ್ಯರ ಸಲಹೆಯನ್ನೂ ಪಡೆಯಿರಿ!

Leave A Reply

Your email address will not be published.