ಶುಗರ್ ಅಥವಾ ಡಯಾಬಿಟೀಸ್ ಇರುವವರು ಖರ್ಜೂರ ತಿಂದ್ರೆ ಏನಾಗುತ್ತೆ ಗೊತ್ತಾ!

ಇತ್ತೀಚಿನ ದಿನಗಳಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಬಹಳ ಕಷ್ಟದ ವಿಚಾರ. ಯಾಕಂದ್ರೆ ಒಂದು ತಿಂದ್ರೆ ಕಡಿಮೆ ಎರಡು ತಿಂದ್ರೆ ಹೆಚ್ಚು ಎನ್ನುವಷ್ಟು ನಮ್ಮ ದೇಹ ಸ್ಥಿತಿ ಸೆನ್ಸಿಟಿವ್ ಆಗಿದೆ. ಉದಾಹರಣೆಗೆ ಇಂದು ಎಷ್ಟು ಸಣ್ಣ ವಯಸ್ಸಿನಲ್ಲಿಯೇ ಮಧುಮೇಹದಂತಹ ಕಾಯಿಲೆಯಿಂದ ಜನ ಬಳಲುತ್ತಿದ್ದಾರೆ. ಇದಕ್ಕೆಲ್ಲಾ ಕಾರಣ ನಮ್ಮ ಆಹಾರ ಪದ್ಧತಿಗಳಲ್ಲಿ ಆಗಿರುವ ಬದಲಾವಣೆ ಅಂದ್ರೆ ತಪ್ಪಾಗಲ್ಲ!

ಹೌದು, ಇಂದು ಬಹಳಷ್ಟು ಜನರಿಗೆ ಮಧುಮೇಹ, ಶುಗರ್ ಅಥವಾ ಡಯಾಬಿಟಿಸ್ ಕಾಡುತ್ತಿದೆ. ಡಯಾಬಿಟಿಸ್ ಬಂದ ಮೇಲೆ ಸಕ್ಕರೆ, ಸಿಹಿ ತಿನ್ನುವ ಹಾಗಿಲ್ಲ. ಹಾಗಾಗಿ ಸಕ್ಕರೆಗೆ ಹಾಗೂ ಸಿಹಿ ಪದಾರ್ಥಗಳಿಗೆ ಪರ್ಯಾಯವಾಗಿ ಏನನ್ನಾದರೂ ಸೇವಿಸಬೇಕು. ಅದಕ್ಖಾಗಿ ಉತ್ತಮ ಪರ್ಯಾಯವೇ ಖರ್ಜೂರ.

ಖರ್ಜೂರವನ್ನು ಇಂದು ಎಲ್ಲಾ ಸಿಹಿ ಪದಾರ್ಥಗಳನ್ನು ತಯಾರಿಸಲು ಬಳಸಲಾಗುತ್ತದೆ. ಖರ್ಜೂರ ಸೇವನೆ ಮಧುಮೇಹಿಗಳಿಗೆ ಅತ್ಯಂತ ಸುರಕ್ಷಿತ ಎಂದು ಪರಿಗಣಿಸಲಾಗಿದೆ. ಖರ್ಜೂರ ಸಿಹಿಯಾದ ಹಣ್ನು. ಇದರಲ್ಲಿ ಆರೋಗ್ಯಕರವಾದ ಕಾರ್ಬೊಹೈಡ್ರೇಟ್‍ಗಳು, ವಿಟಮಿನ್‍ಗಳು ಮತ್ತು ಮಿನರಲ್‍ಗಳು ಇವೆ. ಸುಮಾರು 100 ಗ್ರಾಂ ಖರ್ಜೂರದಲ್ಲಿ 314 ಕ್ಯಾಲೋರಿಗಳಿವೆ. ವೈದ್ಯರ ಪ್ರಕಾರ ಮಧುಮೇಹಿಗಳು ದಿನಕ್ಕೆ ಎರಡರಿಂದ ಮೂರು ಖರ್ಜೂರಗಳನ್ನು ತಿನ್ನುವುದು ಸುರಕ್ಷಿತ!

ಖರ್ಜೂರವನ್ನು ಮಧುಮೇಹಿಗಳು ಸೇವಿಸಬಹುದು. ಅದರಲ್ಲಿ ಫೈಬರ್, ಆ್ಯಂಟಿಆಕ್ಸಿಡೆಂಟ್, ಕಬ್ಬಿಣಾಂಶ, ಮೆಗ್ನೀಶಿಯಂ ಹಾಗೂ ಪೊಟ್ಯಾಶಿಯಂ ಮತ್ತಿತರ ಮಿನರಲ್‍ಗಳು ಹೇರಳವಾಗಿವೆ.  ಖರ್ಜೂರದಲ್ಲಿರುವ ಫೈಬರ್ ನಿಂದಾಗಿ ರಕ್ತದಲ್ಲಿ ನಿಧಾನವಾಗಿ ಸಕ್ಕರೆ ಅಂಶ ಪ್ರವಹಿಸುವಂತೆ ಮಾಡುತ್ತದೆ. ಅಲ್ಲದೇ ಖರ್ಜೂರ ಹಸಿವನ್ನೂ ಕೂಡ ಕಡಿಮೆ ಮಾಡುತ್ತದೆ. ಆದರೆ ಮಧುಮೇಹಿಗಳು ಹಿತಮಿತವಾಗಿ ಮಾತ್ರ ಖರ್ಜೂರ ಸೇವಿಸಬೇಕು.

ಇನ್ನು ಖರ್ಜೂರದ ಹಣ್ಣಿನಲ್ಲಿರುವ ಫೈಟೋಈಸ್ಟ್ರೋಜನ್‍ಗಳು ದೇಹದ ಪ್ರಮುಖ ಅಂಗಗಳ ಸರಿಯಾದ ಕಾರ್ಯ ನಿರ್ವಹಣೆಗೆ ಸಹಾಯ ಮಾಡುವ ಈಸ್ಟ್ರೋಜನ್‍ಗಳಂತಹ ಪರಿಣಮವನ್ನು ಹೊಂದಿದ್ದು, ದೇಹಕ್ಕೆ ಅತ್ಯಗತ್ಯ ಪೋಷಕಾಂಶಗಳನ್ನು ಕೂಡ ಒದಗಿಸುತ್ತವೆ. ಆದರೂ ಇನ್ಸುಲಿನ್ ಪ್ರತಿರೋಧ ಮತ್ತು ಮಧುಮೇಹಕ್ಕೆ ಸಂಬಂಧಿಸಿದಂತೆ ಫೈಟೋಈಸ್ಟ್ರೋಜನ್‍ಗಳ ಪ್ರಯೋಜನಗಳ ಬಗ್ಗೆ ಇನ್ನಷ್ಟು ಸಂಶೋಧನೆಗಳು ನಡೆಯಬೇಕಷ್ಟೇ!

ಹಾಗೆಯೇ ಖರ್ಜೂರದಲ್ಲಿ ಕಡಿಮೆ ಗ್ಲೈಸಮಿಕ್ ಸೂಚ್ಯಂಕ ಇದ್ದು, ಮಿತವಾಗಿ ಸೇವಿಸಿದಾಗ ಇದು ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ಹೆಚ್ಚಾಗದಂತೆ ತಡೆಯುತ್ತದೆ. ಈ ಎಲ್ಲಾ ಪ್ರಯೋಜನಗಳಿದ್ದರೂ ಕೂಡ ಖರ್ಜೂರವನ್ನು ಸೇವಿಸುವುದು ಮಿತವಾಗಿರಬೇಕು. ಜೊತೆಗೆ ಡಯಾಬಿಟಿಸ್ ಇರುವವರು ಒಮ್ಮೆ ವೈದ್ಯರ ಬಳಿ ಸಲಹೆ ಪಡೆದು ನಂತರ ಸೇವಿಸಿದರೆ ಉತ್ತಮ.

Leave A Reply

Your email address will not be published.