ಬೆಳಗಿನ ಉಪಹಾರಕ್ಕೆ ರೆಡಿ ಮಾಡಿ ಎಳ್ಳು ಬೆಲ್ಲದ ರೊಟ್ಟಿ: ಮನೆಯವರು ಚಪ್ಪರಿಸಿಕೊಂಡು ತಿನ್ನುತ್ತಾರೆ ನೋಡಿ

ಎಳ್ಳು ಬೆಲ್ಲದ ರೊಟ್ಟಿ ರೆಸಿಪಿಯನ್ನು ನಾವು ಇಂದು ಈ ಲೇಖನದಲ್ಲಿ ಹೇಳುತ್ತಿದ್ದೇವೆ. ಸುಲಭವಾಗಿ ಮನೆಯಲ್ಲಿಯೇ ಮಾಡಿಕೊಳ್ಳಬಹುದು. ಇದು ಆರೋಗ್ಯಕ್ಕೂ ಅತ್ಯಂತ ಒಳ್ಳೆಯದು. ಹಾಗೂ ಬಾಯಿಗೂ ರುಚಿ ನೀಡುವ ತಿಂಡಿ. ದಿನವೂ ಒಂದೇ ತರಹದ ತಿಂಡಿ ತಿನ್ನುವುದು ಬೋರ್‍ ಅಲ್ವಾ? ಹಾಗಾದರೆ ನೀವೂ ಯಾಕೆ ಈ ರೆಸಿಪಿಯನ್ನು ಒಮ್ಮೆ ಟ್ರೈ ಮಾಡಬಾರದು? ಬನ್ನು ಹಾದಾದರೆ ರೆಸಿಪಿ ನೋಡೋಣ.

ಬೇಕಾಗುವ ಸಾಮಾಗ್ರಿಗಳು:

ಕಾಲು ಕಪ್ ಬೆಲ್ಲ

ಒಂದು ಕಪ್ ಗೋಧಿ ಹಿಟ್ಟು

ಕಾಲು ಕಪ್ ಎಳ್ಳು ಬಿಳಿ ಎಳ್ಳು

ರುಚಿಗೆ ತಕ್ಕಷ್ಟು ಉಪ್ಪು

ಎರಡು ಚಮಚ ಎಣ್ಣೆ

ಕಾಲು ಕಪ್ ಉದ್ದಿನ ಬೇಳೆ

7-8 ಒಣ ಮೆಣಸಿನಕಾಯಿ

ಮುಕ್ಕಾಲು ಚಮಚ ಕೊತ್ತಂಬರಿ ಬೀಜ

ಅರ್ಧ ಚಮಚ ಜೀರಿಗೆ

ಹುಣಸೆ ಹಣ್ಣು ಸ್ವಲ್ಪ

4 ಚಮಚ ಕೊಬ್ಬರಿ ತುರಿ

ತುಪ್ಪ, ಸ್ವಲ್ಪ

ಮಾಡುವ ವಿಧಾನ ಹೀಗಿದೆ:

ಮೊದಲಿಗೆ ಒಂದು ಪಾತ್ರೆಗೆ ಕಾಲು ಕಪ್ ಬೆಲ್ಲ, ಅರ್ಧ ಕಪ್ ನೀರು ಹಾಕಿ, ಬೆಲ್ಲ ಕರಗುವವರೆಗೆ ಮಿಕ್ಸ್ ಮಾಡಿ. ಇದಕ್ಕೆ  ೧ ಕಪ್ ಗೋಧಿ ಹಿಟ್ಟು, ಬಿಳಿ ಎಳ್ಳು,  ಉಪ್ಪು ಹಾಕಿ ಚೆನ್ನಾಗಿ ಕಲಸಿಕೊಳ್ಳಿ. ಅಗತ್ಯವಿದ್ದರೆ ಸ್ವಲ್ಪ ನೀರು ಹಾಕಿ, ಚಪಾತಿ ಹಿಟ್ಟಿನ ಹದಕ್ಕೆ ನಾದಬೇಕು. ನಂತರ  ಎಣ್ಣೆ ಹಾಕಿ ಸವರಿ. ಬಳಿಕ ಮುಚ್ಚಳ ಮುಚ್ಚಿ ೧೦ ನಿಮಿಷ ನೆನೆಯಲು ಬಿಡಿ.

ಈಗ ಬಾಣಲೆ ಬಿಸಿ ಮಾಡಿ ಎಣ್ಣೆ ಹಾಕಿ. ಅದಕ್ಕೆ ಕಾಲು ಕಪ್ ಉದ್ದಿನ ಬೇಳೆ ಹಾಕಿ ಹುರಿದು ತೆಗೆಯಿರಿ. ನಂತರ ಅದೇಬಾಣಲೆಗೆ   ಒಣ ಮೆಣಸಿನಕಾಯಿ ಹಾಕಿ ಚೆನ್ನಾಗಿ ಹುರಿಯಿರಿ. ಬಳಿಕ ಮುಕ್ಕಾಲು ಚಮಚ ಕೊತ್ತಂಬರಿ ಬೀಜ, ಅರ್ಧ ಚಮಚ ಜೀರಿಗೆ ಹಾಕಿ ಚೆನ್ನಾಗಿ ಹುರಿದುಕೊಳ್ಳಿ.

ಒಂದು ಮಿಕ್ಸಿ ಜಾರಿಗೆ ಹುರಿದ ಈ ಎಲ್ಲಾ ಸಾಮಾಗ್ರಿಗಳನ್ನು ಸ್ವಲ್ಪ ಆರಿದ ಮೇಲೆ ಹಾಕಿ. ಅದಕ್ಕೆ ಹುಣಸೆ ಹಣ್ಣು, ಕೊಬ್ಬರಿ ತುರಿ, ಉಪ್ಪು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಇದನ್ನು ಬೇರೆ ಪಾತ್ರೆಯಲ್ಲಿ ತೆಗೆದಿಡಿ. ಈಗ ಕಲಸಿದ ಹಿಟ್ಟನ್ನು ಪುನಃ ನಾದಿ ಚಪಾತಿ ತರ ಲಟ್ಟಿಸಿಕೊಳ್ಳಬೇಕು. ಕಾವಲಿಯನ್ನು ಬಿಸಿಮಾಡಿ, ಅದರ ಮೇಲೆ ರೊಟ್ಟಿ ಹಾಕಿಬೇಯಿಸಿ. ಮಗುಚಿ ಹಾಕಿ, ಮೇಲೆ ಸ್ವಲ್ಪ ತುಪ್ಪ ಸವರಿ, ಎರಡೂ ಬದಿ ಚೆನ್ನಾಗಿ ಬೇಯಿಸಿ. ಈಗ ರುಚಿಯಾದ ಎಳ್ಳು ಬೆಲ್ಲದ ಜೊತೆ ಖಾರ ಚಟ್ನಿ ಸವಿಯಲು ಸಿದ್ಧ.

Leave A Reply

Your email address will not be published.