ಬೋಟ್ ಕಟ್ಟಿ ಗೆದ್ದಅಮನ್ ಗುಪ್ತ: ಗೆಲುವಿನ ಹಿಂದಿರುವ ಸೋಲಿನ ಕಥೆ!

ಜೀವನದಲ್ಲಿ ಕಷ್ಟ ಯಾರಿಗೆ ಬರುವುದಿಲ್ಲ ಹೇಳಿ. ಎಲ್ಲರ ಜೀವನದಲ್ಲಿಯೂ ಕಷ್ಟಗಳು ಮಾಮೂಲು. ಆದರೆ ಒಬ್ಬೊಬ್ಬರ ಜೀವನದಲ್ಲಿ ಒಂದು ರೀತಿಯಾಗಿ ಇರುತ್ತವೆ ಅಷ್ಟೆ. ಆದರೆ ಕಷ್ಟ ಬಂದಾಗ ಕುಗ್ಗದೆ ಅದನ್ನೇ ತನ್ನ ಜೀವನ ರೂಪಿಸುವ ಮೆಟ್ಟಿಲು ಎಂದು ತಿಳಿದಾಗ ಮಾತ್ರ ಮುಂದೆ ಯಶಸ್ಸನ್ನು ಕಾಣಲು ಸಾಧ್ಯ. ಅದಕ್ಕೆ ತಾಜಾ ಉದಾಹರಣೆ ಎಂದರೆ ಬೋಟ್ ಎನ್ನುವ ಸ್ಪೀಕರ್ ಕಂಪನಿಯ ಮಾಲೀಕ ಅಮನ್ ಗುಪ್ತ ಅವರು. ಇವರ ಜೀವನದ ಕಥೆ ಕೇಳಿದರೆ ಹಲವು ಯುವಕರಿಗೆ ಪ್ರೇರಣೆ ನೀಡಬಹುದು. ಜೀವನದಲ್ಲಿ ಎಲ್ಲವೂ ಮುಗಿಯಿತು ಎಂದುಕೊಂಡವರಿಗೆ ಸಾಧಿಸುವ ಛಲ ನೀಡಬಹುದು.

ಅಮನ್ ಗುಪ್ತ ಅವರು ಜೀವನದಲ್ಲಿ ಯಶಸ್ಸನ್ನು ನೋಡುವುದಕ್ಕಿಂತ ಹೆಚ್ಚು ವಿಫಲತೆಯನ್ನೇ ಕಂಡಿದ್ದಾರೆ. ಅವರ ಜೀವನದಲ್ಲಿ ಹೆಜ್ಜೆ ಹೆಜ್ಜೆಗೂ ವೈಫಲ್ಯವನ್ನೇ ಕಂಡರು. ಆದರೂ ಛಲ ಬಿಡದೆ ಇದೆಲ್ಲ ಜೀವನದಲ್ಲಿ ಮಾಮೂಲಿ ಎಂದುಕೊಂಡು ಸಾಧನೆಯತ್ತ ಮುಖಮಾಡಿದರು. ಇಂದು ದೇಶದ ಪ್ರಮುಖ ಬ್ಯುಸಿನೆಸ್ಮೆನ್ ಗಳಲ್ಲಿ ಇವರು ಒಬ್ಬರಾಗಿದ್ದಾರೆ. ಬೋಟ್ ಎನ್ನುವ ಸ್ಪೀಕರ್ ಮಾರಾಟ ಕಂಪನಿ ಸ್ಥಾಪಿಸಿ ಯಶಸ್ಸು ಕಂಡಿದ್ದಾರೆ. ಅತ್ಯಂತ ಕಿರಿಯ ವಯಸ್ಸಿನಲ್ಲಿಯೇ ಸಿ.ಎ. ಬರೆದು ಪಾಸು ಮಾಡಿದ ವ್ಯಕ್ತಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಅಮನ್ ಗುಪ್ತ ಅವರು ಕೇವಲ ಒಂದು ವರ್ಷದಲ್ಲಿ 500 ಕೋಟಿ ರೂ. ವ್ಯವಹಾರ ಮಾಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಇಂದು ಯಾರಾದರೂ ಸೌಂಡ್ ಎಕ್ಯೂಪ್ಮೆಂಟ್ ಬೇಕು ಎಂದರೆ ಮೊದಲು ಆಯ್ಕೆ ಮಾಡುವುದು ಬೋಟ್ ಕಂಪನಿಯನ್ನು. ಇಂದು ಮಾರುಕಟ್ಟೆಯಲ್ಲಿ 200ಕ್ಕೂ ಅಧಿಕ ಸೌಂಡ್ ಎಕ್ಯೂಪ್ಮೆಂಟ್ ಮಾರಾಟ ಮಾಡುವ ಸಂಸ್ಥೆಗಳಿವೆ. ಆ ಪೈಪೋಟಿಯ ನಡುವೆಯೂ ಗೆಲುವು ಕಂಡಿದ್ದಾರೆ ಅಮನ್ ಗುಪ್ತ. ಬೋಟ್ ಇಂದು ಭಾರತೀಯ ಮಾರುಕಟ್ಟೆಯಲ್ಲಿ ಅತ್ಯಂತ ಕಡಿಮೆ ಅವಧಿಯಲ್ಲಿ ಬೆಳೆದು ನಿಂತಿರುವ ಸಂಸ್ಥೆಯಾಗಿದೆ.

ಬೋಟ್ ಸಂಸ್ಥೆಯನ್ನು ಅಮನ್ ಗುಪ್ತ ಅವರು ತಮ್ಮ ಸ್ನೇಹಿತ ವೀರ್ ಮೆಹೆತಾ ಅವರ ಜೊತೆ ಸೇರಿ 2014ರಲ್ಲಿ ಪ್ರಾರಂಬಿಸಿದರು. ಈ ಸಂಸ್ಥೆಯು 2020ರಲ್ಲಿ 500 ಕೋಟಿ ರೂ. ಲಾಭ ಗಳಿಸಿದೆ. ಆಗ ಇಡೀ ದೇಶದಲ್ಲಿ ಕರೋನಾ ಆರ್ಭಟ ಹೆಚ್ಚಾಗಿ ಲಾಕ್ ಡೌನ್ ಮಾಡಲಾಗಿತ್ತು. ಇಂತಹ ಸಂಕಷ್ಟದ ಸಮಯದಲ್ಲೂ ಬೋಟ್ ವ್ಯಾಪಾರ ಕಡಿಮೆ ಆಗಿರಲಿಲ್ಲ. ಪ್ಯಾಪ್ಯೂಲರ್ ಬ್ರ್ಯಾಂಡ್ ಆಗಿ ಹೊರಹೊಮ್ಮಿತ್ತು.

ಅಮನ್ ಗುಪ್ತ ಅವರ ಜೀವನವನ್ನು ನೋಡುವುದಾದರೆ ಅಮನ್ ಗುಪ್ತ ಅವರು ಹುಟ್ಟಿದ್ದು ಬೆಳೆದಿದ್ದು ಎಲ್ಲ ರಾಷ್ಟ್ರ ರಾಜದಾನಿ ದೆಹಲಿಯಲ್ಲಿ. ಇವರು ತಮ್ಮ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ದೆಹಲಿಯ ಪಬ್ಲಿಕ್ ಸ್ಕೂಲ್ನಲ್ಲಿ ಮುಗಿಸಿದರು. ನಂತರ ದೆಹಲಿ ವಿವಿಯಲ್ಲಿ ತಮ್ಮ ಪದವಿ ಪಡೆಯುತ್ತಾರೆ.  ಇದೇ ವೇಳೆಗೆ ಸಿ.ಎ ಪರೀಕ್ಷಗೂ ಹಾಜರಾಗಿ ಪಾಸಾಗುತ್ತಾರೆ. ಸಿ.ಎ. ಪರೀಕ್ಷೆ ಪಾಸು ಮಾಡಿದ ಅತಿ ಕಿರಿಯ ವಯಸ್ಸಿನ ವ್ಯಕ್ತಿ ಎಂಬ ಹೆಗ್ಗಳಿಕೆಯೂ ಇವರಿಗೆ ಇದೆ. ಆದರೂ ಅವರಿಗೆ ಜೀವನ ತಾವಂದುಕೊಂಡಂತೆ ಸಾಗುತ್ತಿಲ್ಲ. ಏನಾದರೂ ಸಾಧನೆ ಮಾಡಬೇಕು ಎಂಬ ತುಡಿತ ಅವರಲ್ಲಿ ಇತ್ತು. ಅದಕ್ಕಾಗಿ ಅವರು ದೆಹಲಿಯ ಕ್ಯಾಲೋಕ್ಸ್ ಸಂಸ್ಥೆಯಲ್ಲಿ ಎಂಬಿಎ ಅಧ್ಯಯನ ಮಾಡುತ್ತಾರೆ. ನಂತರ ಅವರು ಮೊದಲ ಬಾರಿಗೆ ಕೆಪಿಎಂಜಿ ಎನ್ನುವ ಎಂಎನ್ಸಿ ಸಂಸ್ಥೆಗೆ ಉದ್ಯೋಗಕ್ಕಾಗಿ ಸೇರಿಕೊಳ್ಳುತ್ತಾರೆ.  ನಂತರ ಸಿಟಿ ಬ್ಯಾಂಕ್ ಹಾಗೂ ಎಟಿಎಂ ಎನ್ನುವ ಸಂಸ್ಥೆಯಲ್ಲೂ ಕೆಲಸ ಮಾಡುತ್ತಾರೆ. ಆದರೆ ಅವರಿಗೆ ಆತ್ಮತೃಪ್ತಿ ಮಾತ್ರ ಇರುವುದಿಲ್ಲ. ಇನ್ನು ಏನೋ ಸಾಧನೆ ಮಾಡಬೇಕು ಎಂಬ ಹಂಬಲ ಅವರಿಗೆ ಹೆಚ್ಚಾಗುತ್ತದೆ. ಆಗ ಅವರು ತಾನು ಸಹ ಬ್ಯುಸಿನೆಸ್ ಮಾಡಬೇಕು ಎಂಬ ತೀರ್ಮಾನಕ್ಕೆ ಬರುತ್ತಾರೆ. ಈ ವೇಳೆ ತಂದೆಯ ಸಹಕಾರ ಹಾಗೂ ಸಲಹೆಯ ಆಧಾರದ ಮೇಲೆ ಆರಂಭಿಸಿದ ಸಂಸ್ಥೆಯೇ ಬೋಟ್ ಆಗಿದೆ.

ಈ ಬೋಟ್ ಸಂಸ್ಥೆ ರಾತ್ರಿ ಬೆಳೆಗಾಗುವದರೊಳಗೆ ಏನೂ ಜನಪ್ರಿಯವಾಗಲಿಲ್ಲ. ಆಗ ಅಮನ್ ಗುಪ್ತ ಅವರು ಸತತವಾಗಿ ಸೋಲು, ಅವಮಾನಗಳನ್ನೇ ನೋಡಿದರು. ಅವರು ಮೊದಲ ಬಾರಿ ತಾವು ತಯಾರಿಸಿದ ಉತ್ಪನ್ನಗಳನ್ನು ಮಾರಾಟ ಮಾಡುವಾಗ ಅನೇಕ ಕಂಪನಿಗಳನ್ನು ಅಲೆದಾಡಿದರು. ಆ ವೇಳೆ ಕೆಲವೊಂದು ಕಂಪನಿಗಳು ಅಮನ್ ಅವರನ್ನು ದಿನಗಟ್ಟಲೆ ಕಾಯಿಸಿವೆಯಂತೆ. ಅದನ್ನು ಅವರು ಹಲವಾರು ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ. ಅಮನ್ ಹೊರಟ ಹಾದಿಯಲ್ಲಿ ಕೊಂಕು ಮಾತುಗಳು, ಕಂಪನಿ ಇಂದೆಲ್ಲ ನಾಳೆ ಮುಚ್ಚಿಹೋಗುತ್ತದೆ, ಲಾಭ ಗಳಿಸಿವುದಿಲ್ಲ ಎಂದು ಅವರ ಕಂಪನಿ ಉದ್ಯೋಗಿಗಳೇ ಮಾತನಾಡಿಕೊಳ್ಳುತ್ತಿದ್ದರು. ಆದರೆ ಅಮನ್ ಗುಪ್ತ ಅವರು ಮಾತ್ರ ತಮ್ಮ ಗುರಿಯನ್ನು ಬಿಡಲಿಲ್ಲ. ಇದಕ್ಕೆ ಅವರ ಪತ್ನಿ ಹಾಗೂ ಕುಟುಂಬದವರು ಸಹ ಬೆಂಬಲವಾಗಿ ನಿಂತರು. ನಂತರ ಅವರು ಫ್ಲಿಪ್ ಕಾರ್ಟ್ನಂತಹ ಈ ಕಾಮರ್ಸ್ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ.

ಹೀಗೆ ಅಮನ್ ಗುಪ್ತ ಅವರು ಸೋಲುಗಳನ್ನೇ ಕಂಡರೂ ಅದರಿಂದ ಕುಗ್ಗದೆ ಬಗ್ಗದೆ ಅದಕ್ಕೆ ಎದೆಯೊಡ್ಡಿ ನಿಂತು ಇಂದು ಭಾರತದ ದೊಡ್ಡ ಉದ್ಯಮಿಯಾಗಿದ್ದಾರೆ. ಇವರ ಜೀವನ ನಿಜಕ್ಕೂ ಯುವಜನರಿಗೆ ಸ್ಪೂರ್ತಿಯಾಗಿದೆ.

Leave A Reply

Your email address will not be published.