ಯುವಕರಿಗೆ ರಾಕಿ ಬಾಯ್ ಹೇಳಿದ ಸಕ್ಸೆಸ್ ಸಿಕ್ರೇಟ್; ಯಶ್ ಮಾತಿಗೆ ವಿದ್ಯಾರ್ಥಿಗಳು ಫಿದಾ!

ಕನ್ನಡ ಚಿತ್ರರಂಗಕ್ಕೆ ಪುಟ್ಟ ಪುಟ್ಟ ಹೆಜ್ಜೆ ಇಡುತ್ತಾ ಬಂದು ಇಂದು ವಿಶ್ವ ಮಟ್ಟದಲ್ಲಿ ಪ್ರಸಿದ್ಧಿ ಪಡೆದ ನಟರಲ್ಲಿ ರಾಕಿಂಗ್ ಸ್ಟಾರ್ ಯಶ್ ಅಗ್ರಗಣ್ಯರು. ಅವರು ರಾತ್ರಿ ಬೆಳಗಾಗುವದರೊಳಗೆ ಸ್ಟಾರ್ ಆದವರಲ್ಲ ಅದಕ್ಕಾಗಿ ಸಿಕ್ಕಾಪಟ್ಟೆ ಕಷ್ಟ ಪಟ್ಟಿದ್ದಾರೆ. ಸಿಕ್ಕ ಸಣ್ಣ ಸಣ್ಣ ಅವಕಾಶಗಳನ್ನು ಬಳಸಿಕೊಂಡಿದ್ದಾರೆ. ಆದರೆ ತಾನೊಬ್ಬ ಒಳ್ಳೆಯ ಕಲಾವಿದ ಆಗಬೇಕು, ಜನರು ನನ್ನನ್ನು ಪ್ರೀತಿಸಬೇಕು ಎಂಬ ಗುರಿ ಮಾತ್ರ ಬಿಡಲಿಲ್ಲ. ಅವರ ಈ ಹಠವೇ ಅವರನ್ನು ಇಂದು ಪ್ರಪಂಚವೇ ಪ್ರೀತಿಸುವಂತೆ ಮಾಡಿದೆ. ರಾಕಿಂಗ್ ಸ್ಟಾರ್ ಯಶ್ ಅವರು ಮೊನ್ನೆ ಮಂಡ್ಯದಲ್ಲಿ ನಡೆದ ಯುವಜನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ ವಿದ್ಯಾರ್ಥಿಗಳಲ್ಲಿ ಹೊಸಹುರುಪನ್ನು ತುಂಬಿದ್ದಾರೆ. ಜೊತೆ ಒಂದಿಷ್ಟು ಕಿವಿಮಾತನ್ನು ಹೇಳಿದ್ದಾರೆ.

ಸಮಾರಂಭದಲ್ಲಿ ಮಾತನಾಡಿದ ಯಶ್ ಅವರು, ವಿದ್ಯಾರ್ಥಿಗಳ ಜೊತೆ ಮಾತನಾಡುವುದು ನನಗೆ ಖುಷಿಯ ವಿಚಾರ. ತಾನು ವಿದ್ಯಾರ್ಥಿ ಜೀವನದಲ್ಲಿ ನಂಬರ್ ಒನ್ ಸ್ಟೂಡೆಂಟ್ ಏನು ಆಗಿರಲಿಲ್ಲ.  ನಾನು ನನ್ನ ತಂದೆ-ತಾಯಿ ಇಷ್ಟಪಡುವಂತಹ ವಿದ್ಯಾರ್ಥಿ ಆಗಿರಲಿಲ್ಲ. ನಾನು ತುಂಬಾ ಬೇಜವಾಬ್ದಾರಿಂದ ಸ್ಟಂಟ್ ಗಳನ್ನು ಮಾಡಿಕೊಂಡು ಇರುತ್ತಿದ್ದೆ.  ಗೆಳೆಯರ ಜೊತೆ ಕಾಳಿದಾಸ ರಸ್ತೆ, ಒಂಟಿಕೊಪ್ಪಲ್, ಪಡವಾರಹಳ್ಳಿ ಎಲ್ಲ ಕಡೆ ಸುತ್ತಾಡುತ್ತಿದ್ದೆವು. ಆದರೂ ನಾನು ಇವತ್ತು ನನ್ನ ಊರಿನ ಎಲ್ಲರೂ ನನ್ನನ್ನು ಇಷ್ಟಪಡುವ ರೀತಿ ಬೆಳೆದು ನಿಂತಿದ್ದೇನೆ ಎಂದರು.

 ನೀವು ಜೀವನದಲ್ಲಿ ಮಾಡಿಕೊಳ್ಳುವ ಸಣ್ಣ ಸಣ್ಣ ಬದಲಾವಣೆಯೇ ನಿಮ್ಮನ್ನು ಯಶಸ್ಸಿನತ್ತ ಕರೆದೊಯ್ಯುತ್ತದೆ. ಪ್ರತಿಯೊಬ್ಬರು ಸಾಧನೆ ಮಾಡಬೇಕು ಎಂದರೆ ತುಂಬಾ ಬೋರಿಂಗ್ ಆಗಿ ಇರಬೇಕು. ಆ ವಿಚಾರದ ಕುರಿತೇ ಯಾವಾಗಲೂ ಯೋಚಿಸುತ್ತ ಇರಬೇಕು, ತಪಸ್ಸು ಮಾಡಬೇಕು ಎಂದುಕೊಳ್ಳುತ್ತೇವೆ. ಅದೆಲ್ಲ ಸುಳ್ಳು. ಮೊದಲು ನಿಮ್ಮಲ್ಲಿ ಹುಚ್ಚು ಆತ್ಮವಿಶ್ವಾಸ ಇರಬೇಕು. ಗುರಿಯತ್ತ ಲಕ್ಷ್ಯ ಇರಬೇಕು. ಕನ್ನಡ ಸಿನೆಮಾ ರಂಗವನ್ನು ಇಡೀ ವಿಶ್ವವೇ ತಿರುಗಿ ನೋಡುತ್ತದೆ ಎಂದು ಅಂದುಕೊಂಡಿದ್ದರಾ.. ಆದರೆ ಹುಚ್ಚು ಆತ್ಮವಿಶ್ವಾಸದಿಂದ ಕೆಲಸ ಮಾಡಿದ್ದಕ್ಕೆ ಆ ರೀತಿ ಆಗಿದೆ. ನಾನು ಎಲ್ಲವನ್ನು ಓಪನ್ ಆಗಿ ಹೇಳುತ್ತೇನೆ. ಯಾವಾಗಲೂ ಎಲ್ಲ ಕಡೆ ಧನಾತ್ಮಕ ಶಕ್ತಿ ಪ್ರವಹಿಸಬೇಕು. ಒಳ್ಳೆಯದನ್ನು ಮಾತನಾಡಲು, ಒಳ್ಳೆಯದನ್ನು ಯೋಚಿಸಲು ಶುರು ಮಾಡಿದರೆ ಸಾಕು. ಎಂದಿದ್ದಾರೆ.

ನಿಮ್ಮಂತೆ ಆಲೋಚನೆ ಇರುವವರು ನಿಮ್ಮ ಜೊತೆ ಬಂದು ಸೇರಿಕೊಳ್ಳುತ್ತಾರೆ. ಯಾವಾಗಲೂ ಬದಲಾವಣೆ ಎನ್ನುವುದು ಒಬ್ಬನ ಕೈಯಿಂದ ಸಾಧ್ಯವಾಗುವುದಲ್ಲ. ಅದು ಸಂಘಟನಾ ಕಾರ್ಯಕ್ರಮ. ಪ್ರತಿಯೊಬ್ಬರು ಎಲ್ಲ ಕಷ್ಟಗಳನ್ನು ಎದುರಿಸಿ ಅಂದುಕೊಂಡಿದ್ದನ್ನು ಸಾಧಿಸಿದರೆ ಭಾರತವು ಆಟೋಮೆಟಿಕ್ ಆಗಿ ಅಭಿವೃದ್ಧಿ ಹೊಂದುತ್ತದೆ.

ದೇಶದಲ್ಲಿ ಇಂದು ಸ್ವಾತಂತ್ರ್ಯದ ಅಮೃತಮಹೋತ್ಸವ ಆಚರಣೆ ನಡೆಯುತ್ತಿದೆ. ಅಂದು ಸ್ವಾತಂತ್ರ್ಯಕ್ಕಾಗಿ ಹೋರಾಡಿದವರನ್ನು ಸ್ಮರಿಸೋಣ. ಇಂದು ನಮ್ಮನ್ನು ಆಳುವವರನ್ನು ಸ್ಮರಿಸೋಣ. ನಮ್ಮೊಳಗೆ ಒಂದು ಸರ್ಕಾರ ಹುಟ್ಟಬೇಕು. ನಮ್ಮೊಳಗೆ ಎಲ್ಲ ಖಾತೆಗಳು ಇರಬೇಕು. ನಾವೇ ಯೋಜನೆಗಳನ್ನು ಹಾಕಿಕೊಂಡು ಅದನ್ನು ಕಾರ್ಯರೂಪಕ್ಕೆ ತರಬೇಕು. ಸರ್ಕಾರಗಳು ಒಳ್ಳೆಯ ಯೋಜನೆಗಳನ್ನು ಜಾರಿ ಮಾಡುತ್ತಿವೆ. ಅದನ್ನು ತಿಳಿದುಕೊಂಡು ಅದರ ಸದುಪಯೋಗಪಡಿಸಿಕೊಳ್ಳಿ. ಯಾಕೆಂದರೆ ಪ್ರತಿಯೊಬ್ಬರ ಮನೆಗೂ ಸೌಲಭ್ಯವನ್ನು ತಂದುಕೊಡಲು ಸಾಧ್ಯವಿಲ್ಲ. ನಿಮ್ಮಲ್ಲಿ ಸಾಧಿಸುವ ಹಸಿವಿದ್ದರೆ ನಿಮಗೆ ದಾರಿ ಅದಾಗೇ ತೆರೆದುಕೊಳ್ಳುತ್ತದೆ. ಹಾಗಾಗಿ ಎಲ್ಲರೂ ಸಾಧಕರಾಗುವತ್ತ ಮುನ್ನುಗ್ಗಿ ಎಂದು ಹೇಳಿ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬಿದರು.

Leave A Reply

Your email address will not be published.