Team India Cricket: ಸ್ಮಶಾನದಲ್ಲಿ ಮಲಗಿದ್ದ ವ್ಯಕ್ತಿ ಇಂದು ಟೀಂ ಇಂಡಿಯಾದ ಪ್ರಮುಖ ಶಕ್ತಿ!! ಆ ಕನ್ನಡಿಗ ಯಾರು ಗೊತ್ತೇ…?

Team India Cricket:ಬದುಕಿನಲ್ಲಿ ಭರವಸೆಗಳ ಜೊತೆ ಸವಾಲುಗಳು ಸಹ ಸಾವಿರಾರು. ಆದರೇ ಬದುಕುವ ಭರವಸೆಯೊಂದಿಗೆ ಸವಾಲುಗಳನ್ನು ಮೆಟ್ಟಿ ನಿಲ್ಲುವವನೇ ಸಾಧಕ. ಅಂತಹ ಒಬ್ಬ ಸಾಧಕನ ಕತೆಯನ್ನ ನಿಮಗೆ ಹೇಳುತ್ತಿದ್ದೇವೆ, ಗಮನವಿಟ್ಟು ಕೊನೆ ತನಕ ಓದಿ.

ಭಾರತದಂತಹ ದೊಡ್ಡ ದೇಶದಲ್ಲಿ, ಬಾಲ್ಯದಲ್ಲಿ ಪ್ರತಿಯೊಬ್ಬರು ಕ್ರಿಕೇಟ್ ಆಡಿಯೇ ತಮ್ಮ ಕನಸನ್ನ ಶುರು ಮಾಡುತ್ತಾರೆ. ಅದರಲ್ಲಿ ಕೆಲವರು ಕೊನೆ ತನಕ ಕನಸನ್ನ ಕೊಂಡೊಯ್ದರೇ, ಕೆಲವರು ಹವ್ಯಾಸಕ್ಕಾಗಿ ಆಡುತ್ತಾರೆ. ಆದರೇ ಇದೇ ರೀತಿಯ ಕನಸನ್ನ ಹೊತ್ತ ಹುಡುಗನ ಹೆಸರು ರಾಘವೇಂದ್ರ ಅಂತ. ಉತ್ತರ ಕನ್ನಡ ಜಿಲ್ಲೆಯ ಕುಮಟಾದವನು. ಬೇಸಿಗೆ ರಜೆಗೆ ಮುಂಬೈಗೆ ಹೋದವನಿಗೆ, ಅಲ್ಲಿ ರಮಾಕಾಂತ್ ಆಚ್ರೆಕರ್ ಸಿಗುತ್ತಾರೆ. ಅಲ್ಲಿಂದ ಕ್ರಿಕೆಟ್ ಆಸೆ ಮತ್ತಷ್ಟು ಬಲಿಷ್ಠವಾಗಿ ಬೆಳೆಯುತ್ತದೆ. ಬೇಸಿಗೆ ರಜೆ ಮುಗಿಸಿ ಬಂದವನು ತನ್ನ ಆಸೆಯನ್ನ ತಂದೆ ಬಳಿ ಹೇಳುತ್ತಾನೆ. ಆದರೇ ತಂದೆ ಸುತಾರಾಂ ಒಪ್ಪುವುದಿಲ್ಲ. ಆದರೇ ಧೃಢ ನಿರ್ಧಾರ ಮಾಡಿದ ರಾಘು ಕೆ.ಎಸ್.ಸಿ.ಎ ಯ ಆಯ್ಕೆ ಟ್ರಯಲ್ಸ್ ಗೆ ಹುಬ್ಬಳ್ಳಿಗೆ ಹೋದ. ಅಲ್ಲಿ ಯಾವ ಸಂಭಂದಿಕರಾಗಲಿ, ಸ್ನೇಹಿತರಾಗಲಿ ಇರಲಿಲ್ಲ, ಅಲ್ಲಿನ ಬಸ್ ಸ್ಟಾಂಡ್, ದೇವಸ್ಥಾನಗಳಲ್ಲೇ ಎರಡು ವಾರ ಕಳೆದ.ಆದರೇ ಪೋಲಿಸರ ಕಿರಿಕಿರಿಯಿಂದ ನೊಂದ ರಾಘು , ಆಯ್ಕೆ ಟ್ರಯಲ್ಸ್ ನಡೆಯುತ್ತಿದ್ದ ಕ್ರೀಡಾಂಗಣ ಪಕ್ಕದ ಸ್ಮಶಾನವೇ ತನಗೆ ರಾತ್ರಿ ಮಲಗಲು ಸರಿಯಾದ ಜಾಗ ಎಂದು ಆರಿಸಿಕೊಂಡ. ಹಗಲು ಕ್ರೀಡಾಂಗಣದಲ್ಲಿ ಅಭ್ಯಾಸ, ರಾತ್ರಿ ಸ್ಮಶಾನದಲ್ಲಿ ವಾಸ. ಹೀಗೆ ನಾಲ್ಕು ತಿಂಗಳು ಕಳೆದು ಬಿಟ್ಟವು. ಕೊನೆಗೂ ರಾಘುಗೆ ಆಡುವ ಬಳಗದಲ್ಲಿ ಸ್ಥಾನ ಸಿಕ್ಕಿತು. ಆಫ್ ಸ್ಪಿನ್ನರ್ ಆಗಿ ನಾಲ್ಕು ವಿಕೆಟ್ ಕಿತ್ತ ರಾಘುವಿಗೆ , ಕೆ.ಎಲ್.ಇ ಸೋಸೈಟಿಯ ಕ್ರೀಡಾ ಹಾಸ್ಟೆಲ್ ನಲ್ಲಿ ಉಳಿಯುವ ಅವಕಾಶ ಸಿಕ್ಕಿತು. ಇನ್ನೇನು ತನ್ನ ಕಷ್ಟ ಮುಗಿಯಿತು ಎನ್ನುವಷ್ಟರಲ್ಲೇ ವಿಧಿ ತನ್ನ ಆಟ ತೋರಿತು.

ಮೆಟ್ಟಿಲು ಹತ್ತುತ್ತಿದ್ದ ವೇಳೆ ಜಾರಿ ಬಿದ್ದ ರಾಘು ಬಲಗೈ ಮುರಿದು ಬಿದ್ದಿತ್ತು. ಇನ್ನೆಂದು ಬೌಲಿಂಗ್ ನಡೆಸಲು ಸಾಧ್ಯವೇ ಇಲ್ಲ ಎಂದು ವೈದ್ಯರು ಷರಾ ಬರೆದು ಬಿಟ್ಟರು. ದಿಕ್ಕೆ ತೋಚದ ರಾಘು ಕೋಚಿಂಗ್ ಸ್ಟಾಫ್ ಆಗಬೇಕೆಂಬ ಕನಸಿನಿಂದ ಬೆಂಗಳೂರಿಗೆ ಬಂದಿಳಿದ. ಹಿರಿಯ ಆಟಗಾರರೊಬ್ಬರ ರಾಘುವಿನ ಕಷ್ಟ ನೋಡದೆ ಕೆ.ಎಸ್.ಸಿ.ಎ ಗೆ ಕರೆತಂದರು. ಅಲ್ಲಿ ರಣಜಿ ಆಟಗಾರರಿಗೆ ಸಹಾಯಕನಾಗಿ ಸೇರಿಕೊಂಡ ರಾಘುವಿಗೆ ವೇತನ ಸಿಗುತ್ತಿರಲಿಲ್ಲ. ಆದರೇ ಬೇಸರಿಸಿಕೊಳ್ಳದ ರಾಘು ನಗುಮುಖದಿಂದ ಆಟಗಾರರಿಗೆ ಸಹಾಯ ಮಾಡಿ ಅವರ ವಿಶ್ವಾಸಗಳಿಸಿದ.

ಎರಡು ವರ್ಷ ಕರ್ನಾಟಕ ರಣಜಿ ತಂಡಕ್ಕೆ ಸೇವೆ ಸಲ್ಲಿಸಿದ ರಾಘುವಿನ ಪರಿಶ್ರಮ ನೋಡಿ, ಅವನನ್ನ ಎನ್.ಸಿ.ಎ ಗೆ ಕರೆತಂದರು. ಅಲ್ಲಿಯೂ ಸಹ ಆಟಗಾರರಿಗೆ ಹಾಗೂ ಕೋಚ್ ಗಳಿಗೆ ಸಹಾಯ ಮಾಡುವ ಕೆಲಸ. ಅದು ಸಹ ವೇತನರಹಿತವಾಗಿತ್ತು. ಆದರೇ 2008ರಲ್ಲಿ ರಾಘವೇಂದ್ರರವರನ್ನ ಬಿಸಿಸಿಐ ಉದ್ಯೋಗಿಯಾಗಿ ನೇಮಕ ಮಾಡಿತು. ರಾಘವೇಂದ್ರ ಟೀಂ ಇಂಡಿಯಾದ ಸಹಾಯಕ ಸಿಬ್ಬಂದಿಯಾಗಿ ನೇಮಕಗೊಂಡರು.

ಅಲ್ಲಿಂದ ಭಾರತ ತಂಡದ ದಿಸೆ ಬದಲಾಗತೊಡಗಿತು. ಮೊದಲೆಲ್ಲಾ ಭಾರತೀಯ ಬ್ಯಾಟ್ಸ್ ಮನ್ ಗಳು ಸ್ಪಿನ್ ಬೌಲಿಂಗ್ ನ ಲೀಲಾಜಾಲವಾಗಿ ಎದುರಿಸಿ, ವೇಗದ ಬೌಲಿಂಗ್ ಗೆ ತಿಣುಕಾಡಿ ಬೇಗ ವಿಕೇಟ್ ಒಪ್ಪಿಸುತ್ತಿದ್ದರು. ಆದರೇ ಟೀಂ ಇಂಡಿಯಾಕ್ಕೆ ಸೇರಿಕೊಂಡ ರಾಘವೇಂದ್ರ ತಮ್ಮ ಥ್ರೋ ಡೌನ್ ಎಸೆತಗಳನ್ನ ಆಟಗಾರರ ನೆಟ್ಸ್ ಅಭ್ಯಾಸದಲ್ಲಿ ಪ್ರಯೋಗಿಸಲು ಆರಂಭಿಸಿದರು. 150 ರಿಂದ 155 ಕೀ.ಮಿ ಬರುವ ಥ್ರೋ ಡೌನ್ ಎಸೆತಗಳನ್ನ ಎದುರಿಸಿ, ಭಾರತೀಯ ಬ್ಯಾಟ್ಸ್ ಮನ್ ಗಳಲ್ಲಿ ಆತ್ಮವಿಶ್ವಾಸ ಹೆಚ್ಚಾಯಿತು. ಮೈದಾನದಲ್ಲಿ 140 ರಿಂದ 145 ರಲ್ಲಿ ಬರುವ ಎಸೆತಗಳನ್ನ ಸುಲಭವಾಗಿ ಬೌಂಡರಿ ಬಾರಿಸತೊಡಗಿದರು.

ಆಸ್ಟ್ರೇಲಿಯಾ, ವಿಂಡೀಸ್, ಸೌತ ಆಫ್ರಿಕಾ, ನ್ಯೂಜಿಲೆಂಡ್, ಇಂಗ್ಲೆಂಡ್ ಮುಂತಾದ ವೇಗದ ಬೌಲರ್ ಗಳಿಗೆ ಸಾಥ್ ನೀಡುವ ಪಿಚ್ ಗಳಲ್ಲಿ ಭಾರತೀಯ ಬ್ಯಾಟ್ಸ್ ಮನ್ ಗಳು ಶತಕಗಳ ಮೇಲೆ ಶತಕ ಬಾರಿಸಲು ಕಾರಣ, ನೆಟ್ಸ್ ನಲ್ಲಿ ನಾವು ಎದುರಿಸುವ ರಾಘವೇಂದ್ರರವರ ಎಸೆತಗಳೇ ಕಾರಣ ಎಂದು ಬೇಷರತ್ ಆಗಿ ಒಪ್ಪಿಕೊಳ್ಳುತ್ತಾರೆ  ಧೋನಿ ಹಾಗೂ ವಿರಾಟ್ ಕೋಹ್ಲಿ. ಧೋನಿ ಹೇಳುವ ಪ್ರಕಾರ ನಾವು ಅಭ್ಯಾಸವನ್ನ ವಿದೇಶಿ ಬೌಲರ್ ಗಳಿಂದ ನಡೆಸುತ್ತೆವೆ ಎಂದು. ಅಂದರೇ ಧೋನಿ ಪ್ರಕಾರ ರಾಘು ವಿದೇಶಿ ಬೌಲರ್.

ಒಂದು ಕಾಲದಲ್ಲಿ ಸ್ಮಶಾನದಲ್ಲಿ ಮಲಗಿದ್ದ ರಾಘವೇಂದ್ರ, ಈಗ ಟೀಂ ಇಂಡಿಯಾದ ಆಧಾರ ಸ್ತಂಭ. ಕಷ್ಟಗಳು ಎಷ್ಟೇ ಬಂದರೂ ಅದನ್ನ ಸಮಚಿತ್ತದಿಂದ ಎದುರಿಸಿದರೇ ಸಾಧನೆ ನಮ್ಮ ಕಾಲಡಿಯಲ್ಲಿ ಎಂಬುದನ್ನ ಈ ಕನ್ನಡಿಗನ ಕತೆಯಿಂದ ನಾವು ತಿಳಿದುಕೊಳ್ಳಬಹುದು.

Comments are closed.