Agriculture: ಅಡಿಕೆ ಬೆಳೆಗಾರರಿಗೆ ಗುಡ್ ನ್ಯೂಸ್; ಎಲ್ಲಾ ರೀತಿಯ ಅಡಿಕೆಗೂ ಬೆಲೆ ಏರಿಕೆ!

Agriculture: ಅಡಿಕೆ ನಮ್ಮ ದೇಶದ ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಒಂದಾಗಿದೆ. ಇತ್ತಿಚಿನ ದಿನಗಳಲ್ಲಿ ನಮ್ಮ ರಾಜ್ಯದಲ್ಲೂ ಅಡಿಕೆ ಬೆಳೆಯುವ ರೈತರ ಸಂಖ್ಯೆ ಗಣನೀಯವಾಗಿ ಏರಿಕೆ ಕಾಣುತ್ತಿದೆ. ಅಡಿಕೆಯಲ್ಲೂ ಹೊಸ ಹೊಸ ತಳಿಗಳನ್ನು ಸಂಶೋಧನೆ ಮಾಡಲಾಗಿದೆ. ಆದರೆ ಅಡಿಕೆಗೆ ದರ ಮಾತ್ರ ಯಾವಾಗ ಏರುಮುಖವಾಗುತ್ತದೆ, ಇಳಿಯುತ್ತದೆ ಎನ್ನುವುದು ತಿಳಿಯುವುದೇ ಇಲ್ಲ. ಅಡಿಕೆ ಬೆಳೆ ಉತ್ತಮವಾಗಿ ಬಂದಾಗಲೂ ಒಂದೊಂದು ಬಾರಿ ದರ ಉತ್ತಮವಾಗಿಯೇ ಇರುತ್ತದೆ. ಕೆಲವೊಮ್ಮೆ ಬೆಳೆ ಹಾಳಾದಾಗಲೂ ದರ ಪಾತಾಳ ಮುಟ್ಟಿರುತ್ತದೆ.

ಮಾರುಕಟ್ಟೆಯಲ್ಲಿ ಏಕಸ್ವಾಮ್ಯ ಸಾಧಿಸಿ, ದಾಸ್ತಾನು ಮಾಡಿ ಬೆಲೆ ಇಳಿಕೆ ಮಾಡುವ ಸನ್ನಿವೇಶ ಉಂಟಾದರೆ, ಈಗಿನ ಧಾರಣೆಯಲ್ಲಿ ಒಂದೆರಡು ತಿಂಗಳಿನಲ್ಲಿ ಇಳಿಕೆ ಮಾಡಿ ಮತ್ತೆ ದರ ಏರಿಕೆ ಮಾಡಲೇಬೇಕು. ಕಾರಣ ಅವರು ಖರೀದಿಸಿರುವ ಮಾಲಿಗೆ ಕನಿಷ್ಟ ಶೇ10 ರಿಂದ 15 ಲಾಭ ಸಿಗಲೇಬೇಕು. ಖರೀದಿದಾರರು ಯಾವಾಗಲೂ ಮಾರುಕಟ್ಟೆಯಲ್ಲಿ ನಡೆಯುತ್ತಿರುವ ದರಕ್ಕೆ ಖರೀದಿ ಮಾಡುತ್ತಾರೆ. ಹಾಗಾಗಿ ದರ ಹೆಚ್ಚಿಸಲೇ ಬೇಕು. ಒಂದು ವೇಳೆ ಖರೀದಿದಾರರು ಅಡಿಕೆ ಬೇಡ ಎಂದು ಹೇಳಿದರೆ ಕೆಲವೇ ಸಮಯದ ತನಕ ಖರೀದಿ ನಿಲ್ಲಿಸಬಹುದು. ನಂತರ ಅಡಿಕೆಯಿಂದ ತಯಾರಾಗುವ ಉತ್ಪನ್ನಗಳಿಗೆ ಅಡಿಕೆ ಕೊರತೆ ಆದಾಗ ಖರೀದಿ ಮಾಡಲೇಬೇಕಾಗುತ್ತದೆ. ಯಾಕೆಂದರೆ ಯಾವ ಖರೀದಿದಾರನು ಇಡೀ ವರ್ಷಕ್ಕೆ ಆಗುವಷ್ಟು ಅಡಿಕೆ ಖರೀದಿ ಮಾಡಿಟ್ಟಿಕೊಳ್ಳುವುದು ಅಸಾಧ್ಯ.

ಮಾರುಕಟ್ಟೆಯಲ್ಲಿ ಚಾಲಿ ಅಡಿಕೆಯಲ್ಲಿ ಯಾವುದೇ ರೀತಿಯ ಏರಿಳಿತ ಆಗಿಲ್ಲ. ಒಂದೇ ದರವನ್ನು ಕಾಯ್ದುಕೊಂಡಿದೆ. ಖಾಸಗಿಯವರು ಕ್ಯಾಂಪ್ಕೋ ದರದ ಮೇಲೆ ಕಣ್ಣಿಟ್ಟು ಕಾಯುತ್ತಿದ್ದಾರೆ. ಕ್ಯಾಂಪ್ಕೊ ಒಂದು ತಿಂಗಳ ಗಡುವು ನೀಡಿದೆ. ಖರೀದಿದಾರರಿಗೆ ಬೇಡಿಕೆಗೆ ತಕ್ಕ ಅಗತ್ಯ ಅಡಿಕೆ ಪೂರೈಕೆ ಆಗದಿದ್ದರೆ ಬೆಲೆ ಕಡಿಮೆ ಎಂದು ಬೆಳೆಗಾರರು ತಮ್ಮ ಅಡಿಕೆಯನ್ನು ಮಾರಾಟ ಮಾಡುವುದಿಲ್ಲ. ಈ ನೆಪದಲ್ಲಿ ಅಡಿಕೆ ದರ ಏರಿಕೆ ಪ್ರಾರಂಭವಾಗುತ್ತದೆ. ಚಾಲಿ ಅಡಿಕೆ ದರ ಭಾರೀ ಕುಸಿತವೇನು ಕಂಡಿಲ್ಲ. ಅಕ್ಟೋಬರ್ ತಿಂಗಳಿಗೂ, ಡಿಸೆಂಬರ್ ತಿಂಗಳಿಗೂ ಅಡಿಕೆ ದರದಲ್ಲಿ ಶೇ4ರಿಂದ 5ರಷ್ಟು ಮಾತ್ರ ಕುಸಿತ ಕಂಡಿದೆ. ಸಂಕ್ರಾಂತಿ ವೇಳೆಗೆ ಮತ್ತೆ ಚಾಲಿ ಅಡಿಕೆ ದರ ಏರಬಹುದು ಎಂದು ಊಹಿಸಲಾಗಿದೆ.

ಕೆಂಪಡಿಕೆ ದರ ಇಳಿಕೆಯಾಗಿ ಎರಡು ತಿಂಗಳು ಕಳೆಯುತ್ತ ಬಂತು. ಸಪ್ಟೆಂಬರ್ ಮಧ್ಯದಲ್ಲಿ 55,೦೦೦ ರೂ. ಮುಟ್ಟಿದ್ದ ಧಾರಣೆ ಇಳಿಯುತ್ತ ಡಿಸೆಂಬರ್ ವೇಳೆಗೆ 4೦,೦೦೦ರೂ.ಗೆ ಬಂದು ಮುಟ್ಟಿದೆ. ಅಡಿಕೆ ಧಾರಣೆ ಕುಸಿತ ಕಂಡ ತಕ್ಷಣ ಶಿವಮೊಗ್ಗ, ಹೊನ್ನಾಳಿ, ಚಿತ್ರದುರ್ಗ ಮಾರುಕಟ್ಟೆಗೆ ಸಿಕ್ಕಾಪಟ್ಟೆ ಅಡಿಕೆ ಬಂದಿತು. ಡಿ.19 ರಂದು ಶಿವಮೊಗ್ಗ ಹಾಗೂ ಚೆನ್ನಗಿರಿ ಮಾರುಕಟ್ಟೆಗೆ 3350-2022 ಚೀಲ ಅಡಿಕೆ ಮಾರಾಟವಾಗಿದೆ. ಉಳಿದ ಕಡೆಯಲಿ ಕೊಯ್ಲು ನಡೆಯುತ್ತಿದ್ದು, ಇನ್ನು ಅಡಿಕೆ ಸಿದ್ದವಾಗದ ಕಾರಣ ಅಡಿಕೆ ಮಾರುಕಟ್ಟೆಗೆ ಬಂದಿಲ್ಲ.

ಚಾಲಿ ಅಡಿಕೆ ದರ ಏರಿಕೆ ಕಾಣಬಹುದು ಎನ್ನುವ ಉದ್ದೇಶದಿಂದ ಖಾಸಗಿ ವ್ಯಾಪಾರಿಗಳು ಕೇವಲ ಗುಣಮಟ್ಟದ ಹಳೆ ಅಡಿಕೆಯನ್ನು ಖರೀದಿ ಮಾಡುತ್ತಿದ್ದಾರೆ. ಇನ್ನು ಕೆಂಪಡಿಕೆ ಧಾರಣೆಯಲ್ಲಿ ವ್ಯತ್ಯಾಸಗಳು ಉಂಟಾಗುತ್ತಿದ್ದು, ಪ್ರತಿ ವಾರವೂ ಏರಿಳಿತ ಕಾಣುತ್ತಿದೆ. ಕಳೆದ ವಾರಕ್ಕೆ ಹೋಲಿಸಿದರೆ ಇಂದು 3೦೦೦ರೂ. ಏರಿಕೆ ಕಂಡಿದೆ.

arecanut rate increase