ಬಾಯಲ್ಲಿಟ್ರೆ ಕರಗೇ ಹೋಗತ್ತೆ ನೋಡಿ ಈ ಈರುಳ್ಳಿ ದೋಸೆ; ಮಾಡೋದು ಎಷ್ಟು ಸುಲಭ ಗೊತ್ತಾ!

ಬೆಳಗಿನ ಉಪಹಾರಕ್ಕೆ ದೋಸೆ ಮಾಡೋದು ಸಹಜ. ಆದ್ರೆ ದೋಸೆಯಲ್ಲಿ ಸಾಕಷ್ಟು ವೈವಿಧ್ಯಗಳಿವೆ. ತರಾವರಿ ದೋಸೆಯನ್ನ ಮಾಡಬಹುದು. ಹಾಗಾಗಿ ನೀವೂ ತಪ್ಪಡೇ ಈ ರೀತಿಯ ಈರುಳ್ಳಿ ದೋಸೆಯನ್ನ ಮಾಡೋದಕ್ಕೆ ಪ್ರಯತ್ನಿಸಿ. ಇದು ಅತ್ಯಂತ ರುಚಿಯೂ ಹೌದು. ಹಾಗೂ ದಿಢೀರ್ ಅಂತ ಸಿದ್ಧ ಪಡಿಸಬಹುದು. ಯಾವುದೇ ಅಕ್ಕಿ ಬೇಳೆ ಇಲ್ಲದೇ ರಾತ್ರಿಯಿಡಿ ಅಕ್ಕಿ ನೆನೆಹಾಕದೇ ಈ ರುಚಿಕರವಾದ ದೋಸೆಯನ್ನು ಮಾಡಿಕೊಂಡು ತಿನ್ನಬಹುದು. ಹಾಗಾದರೆ ಬನ್ನಿ ರೆಸಿಪಿಯನ್ನು ನೋಡೋಣ!

ಬೇಕಾಗುವ ಪದಾರ್ಥಗಳು:

ಅರ್ಧ ಕಪ್ ರವೆ ಅಥವಾ ಸೂಜಿ ರವೆ

ಅರ್ಧ ಕಪ್ ಅಕ್ಕಿಹಿಟ್ಟು

ಕಾಲು ಕಪ್ ಮೈದಾ

ಒಂದು ಚಮಚ ಉಪ್ಪು

4-5 ಕಪ್ ನೀರು

2- ಕತ್ತರಿಸಿದ ಹಸಿ ಮೆಣಸು

ಶುಂಠಿ ಸ್ವಲ್ಪ

ಕೊತ್ತಂಬರಿ ಸೊಪ್ಪು ಸ್ವಲ್ಪ

ಒಂದು ಚಮಚ ಕಾಳು ಮೆಣ್ಸಿನ ಪುಡಿ

ಒಂದು ಚಮಚ ಜೀರಿಗೆ

ಎಣ್ಣೆ ಹುರಿಯಲು ಬೇಕಾಗುವಷ್ಟು

ಸಣ್ಣಗೆ ಹೆಚ್ಚಿದ ಈರುಳ್ಳಿ ಒಂದು

ಈರುಳ್ಳಿ ದೋಸೆ ಮಾಡುವ ವಿಧಾನ:

ಮೊದಲನೆಯದಾಗಿ, ಒಂದು ಪಾತ್ರೆಗೆ ರವೆ, ಅಕ್ಕಿ ಹಿಟ್ಟು, ಮೈದಾ ಮತ್ತು  ಉಪ್ಪು ಹಾಕಿ. ಅದಕ್ಕೆ 3 ಕಪ್ ನೀರು ಸುರಿಯಿರಿ ಗಂಟಾಗದಂತೆ ಚೆನ್ನಾಗಿ ಮಿಕ್ಸ್ ಮಾಡಿ. ಇದಕ್ಕೆ ಹೆಚ್ಚಿಟ್ಟುಕೊಂಡ ಮೆಣಸಿನಕಾಯಿ,  ಶುಂಠಿ, ಕೊತ್ತಂಬರಿ ಸೊಪ್ಪು, ಕಾಳು ಮೆಣಸಿನ ಪುಡಿ ಮತ್ತು ಜೀರಿಗೆ ಸೇರಿಸಿ ಮತ್ತೆ ಚೆನ್ನಾಗಿ ಮಿಶ್ರಣ ಮಾಡಿ. ರವೆ ಚೆನ್ನಾಗಿ ನೆನೆಯಲು 20 ನಿಮಿಷಗಳ ಕಾಲ ಹಾಗೆಯೇ ಬಿಡಿ.

20 ನಿಮಿಷಗಳ ನಂತರ, ಹಿಟ್ಟು ಸ್ವಲ್ಪ ದಪ್ಪವಾಗಿರುತ್ತದೆ. ಆಗ ಅಗತ್ಯವಿದ್ದರೆ ನೀರನ್ನು ಸೇರಿಸಿ ದೋಸೆ ಹಿಟ್ಟಿನ ಹದಕ್ಕೆ ಸಿದ್ಧಪಡಿಸಿಕೊಳ್ಳಿ. ಈಗ ಒಂದು ದೋಸೆ ಕಾವಲಿ ಅಥವಾ ಪ್ಯಾನ್ ನ್ನು ಗ್ಯಾಸ್ ಮೇಲಿಟ್ತು ಬಿಸಿ ಮಾಡಿಕೊಳ್ಳಿ. ಅದಕ್ಕೆ ಸಣ್ಣಗೆ ಕತ್ತರಿಸಿದ ಈರುಳ್ಳಿಯನ್ನು ಸಿಂಪಡಿಸಿ. ನಂತರ ತಕ್ಷಣ ಹಿಟ್ಟನ್ನು ಪ್ಯಾನ್ ಗೆ ಸುರಿಯಿರಿ. ಎಣ್ಣೆಯನ್ನು ದೋಸೆ ಮೇಲೆ ಹಾಕಿ 2 ನಿಮಿಷಗಳ ಕಾಲ ಅಥವಾ ದೋಸೆ ಗರಿಗರಿಯಾಗುವವರೆಗೆ ಬೇಯಿಸಿ ತೆಗೆದರೆ ರುಚಿಯಾದ ಈರುಳ್ಳಿ ದೋಸೆ ಸವಿಯಲು ಸಿದ್ದ. ಟೊಮೆಟೊ ಚಟ್ನಿ ಅಥವಾ ನಿಮಗಿಷ್ಟವಾದ ಚಟ್ನಿ ಜೊತೆ ಗರಿಗರಿಯಾದ ಈರುಳ್ಳಿ ದೋಸೆಯನ್ನು ಸವಿಯಿರಿ.

Comments (0)
Add Comment