Bhagavdgita: ಜೀವನ ಸಾ ಹಿಂದೂ ಧರ್ಮದಲ್ಲಿ ಶ್ರೀ ಕೃಷ್ಣನನ್ನು ಪೂಜಿಸದೇ ಇರುವವರೇ ಇಲ್ಲ. ಒಬ್ಬ ಮನುಷ್ಯನಿಗೆ ಜೀವನದಲ್ಲಿ ಯಾವೆಲ್ಲಾ ಸಂಬಂಧಗಳು ಇರುತ್ತೋ, ಶ್ರೀ ಕೃಷ್ಣ ಆ ಎಲ್ಲಾ ಸಂಬಂಧಗಳ ಸ್ಥಾನವನ್ನೂ ತುಂಬುತ್ತಾನೆ, ತಾಯಿಗೆ ಮಗನಾಗಿ ಪ್ರೀತಿಸುವವರಿಗೆ ಪ್ರೇಮಿಯಾಗಿ, ಆರಾಧಿಸುವವರಿಗೆ ದೇವನಾಗಿ, ಕಷ್ಟದಲ್ಲಿರುವವರಿಗೆ ಸಂಗಾತಿಯಾಗಿ, ಮಕ್ಕಳಿಗೆ ಸ್ನೇಹಿತನಾಗಿ ಹೀಗೆ ಶ್ರೀ ಕೃಷ್ಣ ಎಲ್ಲರಿಗೂ ಅವರವರ ಭಾವನೆಗೆ ತಕ್ಕ ಹಾಗೆ ರೂಪತಾಳುತ್ತಾನೆ. ಶ್ರೀ ಕೃಷ್ಣ ಮಹಾಭಾರತದ ಕುರುಕ್ಷೇತ್ರ ಯುದ್ಧ ಭೂಮಿಯಲ್ಲಿ ಅರ್ಜುನನಿಗೆ ಬೋಧಿಸಿದ ಪಾಠವೇ ಭಗವದ್ಗೀತೆ. ಇದು ಮಾನವ ಜೀವನದ ಪ್ರತಿ ಹಂತದಲ್ಲೂ ಹೊಂದಾಣಿಕೆಯಾಗುವ ಜೀವನ ಮಂತ್ರವೂ ಹೌದು.
ಶ್ರೀ ಕೃಷ್ಣ ಪರಮಾತ್ಮನು ಗೀತೆಯ 18 ಅಧ್ಯಾಯಗಳಲ್ಲಿ ಏನನ್ನು ಹೇಳಿದ್ದಾನೆ ಎಲ್ಲದರ ಒಂದೆರಡು ವಾಕ್ಯಗಳ ಸಾರಾಂಶ ಇಲ್ಲಿದೆ. ಅಧ್ಯಾಯ 1: ತಪ್ಪಾಗಿ ಯೋಚಿಸಬೇಡ. ಅರ್ಜುನ ಯುದ್ಧ ಭೂಮಿಯಲ್ಲಿ ತನ್ನವರನ್ನು ಕೊಲ್ಲುವ ಸಂದರ್ಭ ಬಂದಾಗ ಕುಗ್ಗಿಹೋಗುತ್ತಾನೆ. ಆಗ ಶ್ರೀ ಕೃಷ್ಣ ನೀನು ತಪ್ಪಾಗಿ ಯೋಚಿಸುತ್ತಿದ್ದಿಯಾ. ಧರ್ಮ ಅಂತ ಬಂದಾಗ ಭವ ಬಾಂಧಯಗಳನ್ನೂ ತೊರೆದು, ಧರ್ಮ ಉಳಿಸುವುದಕ್ಕಾಗಿ ಶ್ರಮಿಸಬೇಕು ಎಂದು ಉಪದೇಶಿಸುತ್ತಾನೆ.
ಅಧ್ಯಾಯ 2: ಸರಿಯಾದ ಜ್ಞಾನ. ಅರ್ಜುನನ ದುಃಖಕ್ಕೆ ಅವನ ಅಜ್ಞಾನವೇ ಕಾರಣ ಎನ್ನುತ್ತಾನೆ ಕೃಷ್ಣ. ಯುದ್ಧವನ್ನು ದೂರವಿಟ್ಟರೆ ನೀನು ಧರ್ಮವನ್ನೇ ದೂರವಿಟ್ಟಂತಾಗುತ್ತದೆ. ಅದು ಪಾಪಕಾರ್ಯ. ಹೋರಾಡದಿದ್ದರೆ ಆತನೊಬ್ಬ ಹೇಡಿ ಎನಿಸಿಕೊಳ್ಳುತ್ತಾನೆ ಎಂದು ಎಚ್ಚರಿಸುತ್ತಾನೆ ಕೃಷ್ಣ. ಅಧ್ಯಾಯ 3: ನಿಸ್ಪಾರ್ಥದಿಂದ ಅಭಿವೃದ್ಧಿ. ಕರ್ಮಯೋಗಿಯಾದವನು ಧರ್ಮದ ಆಧ್ಯಾತ್ಮಕ್ಕೆ ಬೆಲೆ ಕೊಟ್ಟು ತನ್ನೆಲ್ಲ ಕೆಲಸಗಳನ್ನು ದೇವರಿಗೆ ಸಮರ್ಪಿಸುತ್ತಾನೆ. ಫಲಿತಾಂಶದ ಬಗ್ಗೆ ಯೋಚಿಸದೆ ಕೆಲಸ ಮಾಡುತ್ತಾನೆ. ಆತನಲ್ಲಿ ಯಾವ ಆಸೆಗಳೂ ಇರುವುದಿಲ್ಲ. ನಮ್ಮ ಆಸೆ, ಸಿಟ್ಟು, ಅತಿಯಾದ ಪ್ರೀತಿಯೇ ನಮ್ಮ ನಿಜವಾದ ಶತ್ರುಗಳು. ಇವು ನಮ್ಮನ್ನು ಸ್ವಾರ್ಥಿಗಳಾಗಿಸುತ್ತವೆ.
ಅಧ್ಯಾಯ 4: ಧರ್ಮಸಂಸ್ಥಾಪನೆಗೆ ಭಗವಂತ ಅವತಾರ ಎತ್ತುತ್ತಾನೆ. ಧರ್ಮಕ್ಕೆ ಹಾನಿಯಾದಾಗ ಭಗವಂತ ಬಂದೇ ಬರುತ್ತಾನೆ. ಒಳ್ಳೆಯವರ ರಕ್ಷಣೆಗೆ ಭ್ಗವಂತ ನಿಲ್ಲುತ್ತಾನೆ. ದುರ್ಜನರ ನಾಶಕ್ಕೆ ಪ್ರತಿ ಯುಗದಲ್ಲಿಯೂ ಧರೆಗೆ ಇಳಿಯುತ್ತಾನೆ ಭಗವಂತ ಎಂದು ಕೃಷ್ಣ ವಿವರಿಸುತ್ತಾನೆ.
ಅಧ್ಯಾಯ 5: ಅಹಂಕಾರಬಿಟ್ಟು ಫಲ ನಿರೀಕ್ಷೆ ಮಾಡದೇ ಕರ್ಮ ಮಾಡಬೇಕು. ಫಲವನ್ನು ಆ ದೇವರಿಗೆ ಬಿಟ್ಟುಬಿಡಬೇಕು. ಆಗ ಮಾತ್ರ ನಾವು ಉತ್ತಮ ಫಲವನ್ನು ಕಾಣಲು ಸಾಧ್ಯ ಎನ್ನುತ್ತಾನೆ ಶ್ರೀ ಕೃಷ್ಣ. ಅಧ್ಯಾಯ 6: ಧ್ಯಾನಸಾಧಕ ಮಾತ್ರ ಕರ್ಮ ಸಾಧನೆ ಮಾಡಬಲ್ಲ. ಧ್ಯಾನವನ್ನು ಅಭ್ಯಾಸ ಮಾಡುವವನು ಏಕಾಂಗಿಯಾಗಿ, ದೇಹವನ್ನೂ ಮನಸ್ಸನ್ನೂ ನಿಯಂತ್ರಿಸಬಲ್ಲ. ತನ್ನ ಪ್ರಯತ್ನದಿಂದಲೇ ಇಂದ್ರಿಯಗಳನ್ನೂ, ಮನಸ್ಸನ್ನು ಗೆಲ್ಲಬೇಕು ಎನ್ನುತ್ತಾನೆ ಶ್ರೀ ಕೃಷ್ಣ.
ಅಧ್ಯಾಯ 7: ನಮಗೆ ನಾವ್ಯಾರು ಎಂದು ಅರಿವಿರಬೇಕು ಧ್ಯಾನ ಮಾಡುತ್ತಿರುವುದರಿಂದ ನಿನಗೆ ನೀನು ಯಾರೆಂಬುದು ಅರಿವಾಗುತ್ತದೆ. ಜ್ಞಾನಿಯು ನನ್ನಲ್ಲಿ ಲೀನನಾಗುತ್ತಾನೆ ಎಂಬ ತತ್ವ ಬೋಧಿಸುತ್ತಾನೆ ಕೃಷ್ಣ. ಅಧ್ಯಾಯ 8: ದೇವರ ಧ್ಯಾನದಲ್ಲಿ ಪ್ರಾಮಾಣಿಕವಾಗಿ ತೊಡಗಿರುವವನಿಗೆ ದೇವರು ಸಿಕ್ಕೇ ಸಿಗುತ್ತಾನೆ. ಮರಳಿ ಪ್ರಯತ್ನ ಮಾಡುತ್ತಿರಬೇಕು ಅಷ್ಟೇ.
ಅಧ್ಯಾಯ 9: ಭಗವಂತನ ಧ್ಯಾನ ಮಾಡು. ಯಾರು ತಮ್ಮ ಆತ್ಮವೆಂದು ನನ್ನನ್ನು ಧ್ಯಾನ ಮಾಡುತ್ತಾರೋ, ನಾನು ಅವರ ಯೋಗಕ್ಷೇಮ ನೋಡಿಕೊಳ್ಳುತ್ತೇನೆ ಎನ್ನುತ್ತಾನೆ ಮಾಧವ. ಅಧ್ಯಾಯ 10: ಕರ್ಮಕ್ಕೆ ತಕ್ಕ ಫಲ ಪ್ರಾಪ್ತಿ. ಭೂಮಿಯ ಪ್ರತಿಯೊಂದು ಚರಾಚರಗಳಲ್ಲೂ ಶ್ರೀ ಕೃಷ್ಣನಿದ್ದಾನೆ. ಜೀವನದಲ್ಲಿ ನಮ್ಮ ಸುತ್ತ ಇರುವ ವಿಷಯವನ್ನು ನೋಡಿ ಖುಷಿಪಡು. ಕರ್ಮಕ್ಕೆ ತಕ್ಕ ಫಲವನ್ನು ನಾನು ನೀಡಿಯೇ ತೀರುತ್ತೇನೆ. ಅಧ್ಯಾಯ 11: ವಿಶ್ವರೂಪ ದರ್ಶನ. ಈಶ್ವರತ್ವದ ರೂಪವನ್ನು ನೋಡುವ ಆಸೆಯನ್ನು ಅರ್ಜುನ ವ್ಯಕ್ತಪಡಿಸುತ್ತಾನೆ. ಇದರಿಂದ ಕೃಷ್ಣನು ತನ್ನ ಆದಿಅಂತ್ಯವಿಲ್ಲದ ಪ್ರಕಾಶಮಾನವಾದ ವಿಶ್ವರೂಪ ದರ್ಶನ ಮಾಡಿಸುತ್ತಾನೆ. ಅರ್ಜುನನಿಗೆ ಆಗ ಸತ್ಯದ ದರ್ಶನವಾಗುತ್ತದೆ.
ಅಧ್ಯಾಯ 12: ವೈರಾಗ್ಯವೂ ಬೇಕು. ಭಗವಂತನಲ್ಲಿ ಹೆಚ್ಚು ಪ್ರೀತಿಯನ್ನಿಟ್ಟು ಭಕ್ತಿಯಿಂದ ಧ್ಯಾನಿಸುತ್ತಾ ಉಪಾಸನೆ ಮಾಡುವರೋ ಅವರೇ ನಿಜವಾದ ಯೋಗಿಗಳು. ಭಗವಂತನ ಮೇಲೆ ನಂಬಿಕೆಯಿಟ್ಟು ಕರ್ಮಗಳನ್ನು ಮಾಡು. ಕರ್ಮಗಳ ಫಲಗಳ ಬಯಕೆಗಳನ್ನೆಲ್ಲಾ ಬಿಡು ಎನ್ನುತ್ತಾನೆ ಕೃಷ್ಣ. ಅಧ್ಯಾಯ 13: ಮಾಯೆಯಿಂದ ದೂರವಿರು. ಬ್ರಹ್ಮಾಂಡವೇ ಒಂದು ಮಾಯೆ. ಆ ಭಗವಂತ ಎಲ್ಲದರಲ್ಲಿಯೂ, ಎಲ್ಲರಲ್ಲಿಯೂ ನೆಲೆಸಿದ್ದಾನೆ. ಯಾವುದೇ ಮಾಯೆಯಿಂದ ದೂರವಾಗಿ ಭಕ್ತಿಯಿಂದ ಜೀವಿಸು ಎಂದು ಕೃಷ್ಣ ವಿವರಿಸುತ್ತಾನೆ.
ಅಧ್ಯಾಯ 14: ಜೀವನಶೈಲಿ. ಸಾತ್ವಿಕ ತಾಮಸ್ ರಜೋಗುಣಗಳ ಕ್ರೋಡಿಕರಣ ಈ ದೇಹ. ನಮ್ಮ ಸ್ವಭಾವಕ್ಕೆ ಅನುಗುಣವಾಗಿ ಇದರಲ್ಲಿ ಒಂದು ಗುಣ ಮೇಲುಗೈ ಸಾಧಿಸುತ್ತದೆ. ಸಾತ್ವಿಕ ಗುಣದವನು ಮೋಕ್ಷ, ರಾಜಸಿಕ ಗುಣದವನು ಪುನರ್ಜನ್ಮ ಹಾಗೂ ತಾಮಸಿಕ ಗುಣದವನು ಕೆಳಮಟ್ಟದ ಜನ್ಮವೆತ್ತುತ್ತಾನೆ ಎಂದು ಕೃಷ್ಣ ಹೇಳುತ್ತಾನೆ. ಅಧ್ಯಾಯ 15: ದೈವಿಕತ್ವಕ್ಕೆ ಬೆಲೆ ಕೊಡು. ಈ ಪ್ರಾಪಂಚಿಕ ಜೀವನದಲ್ಲಿ ನಾವು ಹೇಗೆ ಸಾವು ಹಾಗೂ ಪುನರ್ಜನ್ಮಗಳ ಮಧ್ಯೆ ಸಿಲುಕಿದ್ದೇವೆ ಎಂಬುದನ್ನು ಕೃಷ್ಣ ಅರ್ಜುನನಿಗೆ ತಿಳಿಸುತ್ತಾನೆ. ದೈವಿಕತ್ವಕ್ಕೆ ಬೆಲೆ ಕೊಟ್ಟಾಗ ಮಾತ್ರ ನಾವು ಅಂದುಕೊಂಡಿದ್ದನ್ನು ಸಾಧಿಸಲು ಸಾಧ್ಯ ಎನ್ನುತ್ತಾನೆ ಶ್ರೀ ಕೃಷ್ಣ.
ಅಧ್ಯಾಯ 16 : ಉತ್ತಮನಾಗಿರುವುದೇ ವರ. ಸಿಟ್ಟು, ಕ್ರೂರತೆ, ಅಜ್ಞಾನ, ಅಪ್ರಾಮಾಣಿಕತೆ, ಅತಿಯಾಸೆ, ಅನೈತಿಕತೆ, ಅಹಂಕಾರ ಮುಂತಾದವು ನಮ ವ್ಯಕ್ತಿತ್ವವನ್ನೇ ನಾಶಮಾಡುತ್ತವೆ. ಅದೇ ನಮ್ಮಲ್ಲಿ ಮಾನವೀಯತೆ, ಸತ್ಯ, ಅಹಿಂಸೆ, ತಾಳ್ಮೆ, ಇಂದ್ರಿಯಗಳ ನಿಯಂತ್ರಣ ಗುಣಗಳಿದ್ದರೆ ನಾವು ಏನನ್ನಾದರೂ ಸಾಧಿಸಬಹುದು. ಅಧ್ಯಾಯ 17: ಮೇರು ಸತ್ಯ ಕೃಷ್ಣ ಓಂ ತತ್ ಸತ್ ಮಂತ್ರದ ಮಹತ್ವ ಹೇಳುತ್ತಾನೆ. ಇದರ ಅರ್ಥ ಮೇರು ಸತ್ಯ. ಓಂನಾಮದಿಂದಲೇ ಸತ್ಕಾರ್ಯ ಆರಂಭಿಸಬೇಕು. ಯಜ್ಞ, ದಾನ ಹಾಗೂ ತಪಸ್ಸು ಸತ್ಕಾರ್ಯಗಳು ಇದನ್ನು ಮಾಡಬೇಕು ಎನ್ನುವುದೇ ಶ್ರೀ ಕೃಷ್ಣನ ಉಪದೇಶ.
ಅಧ್ಯಾಯ 18: ಪರಮಾತ್ಮನೊಂದಿಗೆ ಐಕ್ಯವಾಗುವುದು. ಫಲದ ಬಯಕೆಯಿಂದ ಮಾಡುವ ಕರ್ಮಗಳನ್ನು ಬಿಡುವುದು ಸನ್ಯಾಸ, ಆ ಎಲ್ಲಾ ಕರ್ಮಗಳನ್ನು ಮಾಡಿ ಫಲವನ್ನ ಬಯಸದೇ ಇರುವುದು ತ್ಯಾಗ. ಕರ್ಮಯೋಗಿಯಾಗಿ ಬದುಕಬೇಕು. ಪರಮಾತ್ಮನೊಂದಿಗೆ ಐಕ್ಯವಾಗಲು ಇದೇ ದಾರಿ ತೋರುತ್ತದೆ ಎಂದು ಶ್ರೀ ಕೃಷ್ಣ ವಿವರಿಸುತ್ತಾನೆ.
ಶ್ರೀ ಕೃಷ್ಣ ವಿವರಿಸುವ ಈ ಎಲ್ಲಾ ವಿಷಯಗಳೂ ಅಕ್ಷರಶಃ ಮನುಷ್ಯನ ಜೀವನಕ್ಕೆ ಅಳವಡಿಸಿಕೊಂಡರೆ ದುಃಖವಿಲ್ಲದ, ಅತ್ಯುತ್ತಮ ಜೀವನವನ್ನು ನಡೆಸಲು ಸಾಧ್ಯ.