Kannada film News: ರಗಡ್‌ ಲುಕ್‌ನಲ್ಲಿ ಕಮಾಲ್‌ ಮಾಡಲಿದ್ದಾರೆ ಸಲಗ ಸೂರಿ ಖ್ಯಾತಿಯ ದಿನೇಶ್‌ ಕುಮಾರ್! “ಮಾರಿಗುಡ್ಡದ ಗಡ್ಡಧಾರಿಗಳು” ಏ.14ರಂದು ತೆರೆಗೆ!

Kannada film News: ಮನಸೂರೆಗೊಳ್ಳಲಿದೆ ಕೆ.ಎಂ ಇಂದ್ರ ಅವರ ಸಂಗೀತ ಸಂಯೋಜನೆ | ಮೋಡಿ ಮಾಡಲಿದೆ ಜಾಗ್ವಾರ್‌ ಸಣ್ಣಪ್ಪ ಅವರ ಸಾಹಸ ನಿರ್ದೇಶನ ಸಗಲ ಚಿತ್ರದ ಸೂರಿ ಖ್ಯಾತಿಯ ದಿನೇಶ್‌ ಕುಮಾರ್‌ ಹುಲಿಯನಾಗಿ ಮಿಂಚಿರುವ ಬಹುನಿರೀಕ್ಷತ ಚಿತ್ರ “ಮಾರಿಗುಡ್ಡದ ಗಡ್ಡಧಾರಿಗಳು” ಇದೇ ಏಪ್ರಿಲ್‌ 14 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.

ಡಿ.ಜೆ ಪ್ರಕಾಶ್ ಸಿನಿ ಪ್ರೊಡಕ್ಷನ್‌ ಅಡಿಯಲ್ಲಿ, ಸಲಗ ಚಿತ್ರದ ಸೂರಿ ಖ್ಯಾತಿಯ ದಿನೇಶ್‌ ಕುಮಾರ್‌ ಅವರು ನಟಿಸಿ, ಸಹ ನಿರ್ಮಾಪಕ ವಿಜಯ್‌ ಅವರೊಂದಿಗೆ ಸೇರಿ ಅದ್ದೂರಿಯಾಗಿ ನಿರ್ಮಿಸಿರೋ ಮಾರಿಗುಡ್ಡದ ಗಡ್ಡಧಾರಿಗಳು, ಕೋಲಾರದ ಕೆ.ಜಿ.ಎಫ್‌ ಸುತ್ತಮುತ್ತ, ಸತತ 46 ದಿನಗಳ ಕಾಲ ಒಂದೇ ಹಂತದಲ್ಲಿ ಚಿತ್ರೀಕರಣಗೊಂಡಿದೆ.  

‌1994ರಲ್ಲಿ ನಡೆಯುವ ಒಂದು ಕಾಲ್ಪನಿಕ ಕಥೆ ಇದಾಗಿದ್ದು, ಮಾರಿಗುಡ್ಡದಲ್ಲಿ ಗಡ್ಡಧಾರಿಗಳ ಒಡೆಯ ಹುಲಿಯನ ಸುತ್ತ ಒಂದೊಂದೇ ಎಳೆ ಬಿಚ್ಚಿಕೊಳ್ಳುತ್ತ, ಕ್ಲೈಮ್ಯಾಕ್ಸಲ್ಲಿ ಖಳನಾಯಕನೇ ಹೇಗೆ ಕಥಾನಾಯಕನಾಗುತ್ತಾನೆ ಎಂಬುದೇ ಈ ಚಿತ್ರದ ಒನ್‌ ಲೈನ್‌ ಸ್ಟೋರಿ ಅಂತೆ.

ಚಿತ್ರದಲ್ಲಿ ನಾಯಕಿಯಾಗಿ ನಮೃತಾ, ಮಗಳ ಪಾತ್ರದಲ್ಲಿ ಬೇಬಿ ಮರೀಷಾ, ಪ್ರವೀಣ್‌ ಡಿ ರಾಜು, ನಂಜುಂಡ ಎಂಬ ಹೊಸ ಪ್ರತಿಭೆಗಳನ್ನು ಪರಿಚಯಿಸಲಾಗಿದೆ. ಹಿರಿಯ ನಟರಾದ ಅವಿನಾಶ್‌, ರಮೇಶ್‌ ಭಟ್‌, ಗಣೇಶ್‌ ರಾವ್‌, ಬೆನಕ ನಂಜಪ್ಪ, ಪ್ರಶಾಂತ್‌ ಸಿದ್ಧಿ ಅವರ ಅಭಿನಯ ಪ್ರೇಕ್ಷಕರನ್ನು ಮೋಡಿ ಮಾಡಲಿದೆ.

ನಿರ್ದೇಶಕ ಟಿ.ಎಸ್‌ ನಾಗಾಭರಣ ಅವರ ತಂಡದಲ್ಲಿ ಸಹ ನಿರ್ದೇಶಕರಾಗಿ ಕೆಲಸ ಮಾಡಿರುವ, ಆರ್‌ ಚಂದ್ರಕಾಂತ್‌, ಮಾರಿಗುಡ್ಡದ ಗಡ್ಡಧಾರಿಗಳಿಗೆ ಕಥೆ, ಚಿತ್ರಕಥೆ, ಸಂಭಾಷಣೆ ಹೆಣೆದು, ನಿರ್ದೇಶನ ಮಾಡಿದ್ದಾರೆ. ಚಿತ್ರದ ಸಹ ನಿರ್ದೇಶನ ಹಾಗೂ ಮೇಲ್ವಿಚಾರಣೆ ರಂಜಿತ್‌ ತಿಗಡಿಯವರದಾಗಿದ್ದು, ಮದನ್‌ ಹರಿಣಿ ಹಾಗೂ ಮೋಹನ್‌ ನೃತ್ಯ ಸಂಯೋಜನೆ ಮಾಡಿದ್ದಾರೆ.

ಚಿತ್ರಕ್ಕೆ ಸತ್ಯ ಅವ್ರ ಛಾಯಾಗ್ರಹಣವಿದ್ದು, ಎನ್‌.ಎಂ ವಿಶ್ವ ಅವರು ಸಂಕಲನ ಮಾಡಿದ್ದಾರೆ. ಜಾಗ್ವಾರ್‌ ಸಣ್ಣಪ್ಪ ಅವರ ಸಾಹಸ ನಿರ್ದೇಶನ, ಕೆ.ಎಂ ಇಂದ್ರ ಅವರ ಸಂಗೀತ ಸಂಯೋಜನೆ ಹಾಗೂ ಶಶಾಂಕ್‌ ಶೇಷಗಿರಿ ಅವರ ಹಿನ್ನೆಲೆ ಸಂಗೀತ ಚಿತ್ರದ ಸೊಗಡನ್ನು ಡಬಲ್‌ ಮಾಡಲಿದೆ.

ಈಗಾಗಲೇ ಚಿತ್ರದ ಟೀಸರ್‌ ಮತ್ತು ಟ್ರೇಲರ್‌ ಸಖತ್‌ ಸದ್ದು ಮಾಡಿದ್ದು, ಇದೇ ಏಪ್ರಿಲ್‌ 14ರಂದು ರಾಜ್ಯಾದ್ಯಂತ ತೆರೆಗೆ ಅಪ್ಪಳಿಸಲಿರುವ “ಮಾರಿಗುಡ್ಡದ ಗಡ್ಡಧಾರಿಗಳು” ಹೊಸ ದಾಖಲೆ ಬರೆಯುವುದು ನಿಸ್ಸಂಶಯ ಎಂದು ಹೇಳಲಾಗುತ್ತಿದೆ.

Comments are closed.