Trouble in Car: ನೀವು ಓಡಿಸುವ ವಾಹನದಲ್ಲಿ ಉಂಟಾಗಬಹುದಾದ ಈ ಸಾಮಾನ್ಯ ಸಮಸ್ಯೆಗಳ ಬಗ್ಗೆ ತಿಳಿದುಕೊಂಡ್ರೆ ಆಗಾಗ ಸರ್ವಿಸ್ ಗೆ ಕೊಡುವ ಹಣ ಉಳಿತಾಯವಾಗತ್ತೆ ನೋಡಿ!

Trouble in Car: ವಾಹನ ಯಾವುದೇ ಇರಲಿ ನಿಯಮಿತವಾಗಿ ಬಳಸಿದಂತೆ ಅದರಲ್ಲಿ ಸಮಸ್ಯೆಗಳು ಬರುವುದು ಸಾಮಾನ್ಯ. ಖರೀದಿಸಿದ ಮೊದಲ ಕೆಲವು ವರ್ಷಗಳು ಕಾರುಗಳು ಯಾವುದೇ ಸಮಸ್ಯೆಗಳು ಇರದಂತೆ ನಡೆದರೂ ಕಾಲಕ್ರಮೇಣ ಒಂದೊಂದೇ ಭಾಗಗಳು ಸವೆದಂತೆ ಮತ್ತು ರಸ್ತೆಯ ಉಬ್ಬು ತಗ್ಗುಗಳಿಂದ ಕಾರುಗಳು ಮೊದಲ ಸ್ಥಿತಿಯಲ್ಲಿ ಇರದೇ ಸಮಸ್ಯೆಗಳು ಆರಂಭವಾಗುವುದು ಸಹಜ.

ಕ್ಲಚ್ ಬದಲಾವಣೆ, ಸಸ್ಪೆನ್ಷನ್ ಬದಲಾವಣೆ, ಹೊಸ ಟೈಮರ್ ಕಿಟ್ ಅಳವಡಿಕೆ ಗೇರ್ ಶಿಫ್ಟರ್ ಮೊದಲಾದ ದೊಡ್ಡ ಮಟ್ಟದ ರಿಪೇರಿಗಳಿಗೆ ಗ್ಯಾರೇಜ್ ಅಥವಾ ಸರ್ವಿಸ್ ಸೆಂಟರ್ ಅನ್ನು ಅವಲಂಬಿಸುವುದು ಅವಶ್ಯಕ. ಆದರೆ ಇನ್ನುಳಿದಂತೆ ಚಿಕ್ಕ ಪುಟ್ಟ ಸಮಸ್ಯೆಗಳನ್ನು ನಾವೇ ಸರಿಪಡಿಸಿಕೊಂಡರೆ ಖರ್ಚೂ ಕಡಿಮೆ ಆಗುತ್ತದೆ ಜೊತೆಗೆ ರಸ್ತೆಯ ಮಧ್ಯದಲ್ಲಿ ಪ್ರಯಾಣಿಸುತ್ತಿರುವಾಗ ಇಂತಹ ಸಮಸ್ಯೆಗಳು ಎದುರಾದಾಗ ನಾವೇ ಸರಿಪಡಿಸಿಕೊಂಡು ಮುಂದುವರೆಯಬಹುದು. ಇದರಲ್ಲಿ ಕೆಲವನ್ನು ನಾವಿಲ್ಲಿ ನೋಡೋಣ:

ಬ್ಯಾಟರಿ ಸಮಸ್ಯೆ:

ಕಾರು ಖರೀದಿಸಿ ಮೂರು ಅಥವಾ ನಾಲ್ಕು ವರ್ಷಗಳು ಕಳೆದಂತೆ ಬ್ಯಾಟರಿ ವೀಕ್ ಆಗುವುದು ಸಹಜ. ಇದರಿಂದ ಕಾರು ಸ್ಟಾರ್ಟ್ ಆಗದೇ ಇರಬಹುದು. ಹೀಗಾಗಿ ನಿಯಮಿತವಾಗಿ ಬ್ಯಾಟರಿಯ ಸಂಪರ್ಕ ವಯರುಗಳು ಸರಿಯಾಗಿ ಕನೆಕ್ಟ್ ಆಗಿದೆಯೇ ಎಂದು ಪರೀಕ್ಷಿಸಿ. ಟರ್ಮಿನಲ್ ಗಳಲ್ಲಿ ಯಾವುದೇ ಸವೆತದ ಲಕ್ಷಣಗಳು ಇದೆಯೇ ಎಂದು ಪರೀಕ್ಷಿಸುತ್ತಿರಿ. ಮಲ್ಟಿಮೀಟರ್ ಬಳಲಿ ಬ್ಯಾಟರಿಯ ವೋಲ್ಟೇಜ್ ಸರಿಯಾಗಿದೆಯೇ ಎಂದು ಪರೀಕ್ಷಿಸುತ್ತಿರಿ. ಇದರಿಂದ ಬ್ಯಾಟರಿ ಸಮಸ್ಯೆಯಿಂದ ರಸ್ತೆಯ ನಡುವೆ ಕಾರು ನಿಲ್ಲುವುದನ್ನು ತಡೆಯಬಹುದು.

ಎಂಜಿನ್ ಮಿಸ್ ಫೈರ್

ಎಂಜಿನ್ ಮಿಸ್ ಫೈರ್ ಆದಾಗ ಕಾರಿನ ಒಟ್ಟಾರೆ ಕಾರ್ಯಕ್ಷಮತೆಯಲ್ಲಿ ವ್ಯತ್ಯಾಸ ತರುತ್ತವೆ. ಸ್ಪಾರ್ಕ್ ಪ್ಲಗ್ ಗಳಲ್ಲಿ ದೋಷ ಇದ್ದರೆ ದಹನ ಸುರುಳಿಯಲ್ಲಿ ಸಮಸ್ಯೆ ಇದ್ದರೆ ಅಥವಾ ಇಂಧನ ಇಂಜೆಕ್ಟರ್ ಸಮಸ್ಯೆ ಇದ್ದರೆ ಕಾರಿನ ಕಾರ್ಯಕ್ಷಮತೆ ಕಡಿಮೆ ಆಗುತ್ತದೆ. OBD-II ಸ್ಕಾನರ್ ಗಳನ್ನು ಉಪಯೋಗಿಸುವ ಮೂಲಕ ಯಾವ ಸಿಲಿಂಡರ್ ನಲ್ಲಿ ಸಮಸ್ಯೆ ಇದೆ ಎಂದು ತಿಳಿದುಕೊಳ್ಳಬಹುದು.

ಕೂಲೆಂಟ್ ಚೆಕ್ ಮಾಡಿ

ಈಗ ಕಾರುಗಳ ಎಂಜಿನ್ ನ ಬಿಸಿಯನ್ನು ನಿಯಂತ್ರಣದಲ್ಲಿಡಲು ಕೂಲೆಂಟ್ ಗಳನ್ನು ಬಳಸಲಾಗುತ್ತದೆ. ಮೊದಲು ರೇಡಿಯೇಟರ್ ಬಳಸಲಾಗುತ್ತಿತ್ತು. ಆಗ ನೀರಿನ ಮಟ್ಟ ಪರೀಕ್ಷಿಸಿದಂತೆ ಈಗ ಕೂಲೆಂಟ್ ಲೆವೆಲ್ ಅನ್ನು ಪರೀಕ್ಷಿಸಬೇಕಾಗುತ್ತದೆ. ಕೂಲೆಂಟ್ ಮಟ್ಟ ಸರಿಯಿದೆಯೇ ಅಥವಾ ಯಾವುದಾದರೂ ಲೀಕೇಜ್ ಇದೆಯೇ ಎಂದು ಪರೀಕ್ಷಿಸುವ ಮೂಲಕ ಕಾರನ್ನು ಅತಿಯಾಗಿ ಬಿಸಿ ಆಗುವುದರಿಂದ ಮತ್ತು ಇದರಿಂದ ಆಗುವ ಬ್ರೇಕ್ ಡೌನ್ ಅನ್ನು ತಡೆಯಬಹುದು.

ಬ್ರೇಕಿಂಗ್ ಸಮಸ್ಯೆಗಳು

ನಾವು ನಮ್ಮ ಕಾರಿನಲ್ಲಿ ಎಷ್ಟು ವೇಗವಾಗಿ ಹೋಗಬಹುದು ಎನ್ನುವುದನ್ನು ನಿರ್ಧರಿಸುವ ಅಂಶಗಳಲ್ಲಿ ಬ್ರೇಕುಗಳೂ ಒಂದು. ಇಫೆಕ್ಟಿವ್ ಆದ ಬ್ರೇಕ್ ಗಳು ಇದ್ದರೆ ಕಾರನ್ನು ವೇಗವಾಗಿ ಚಲಾಯಿಸಲು ಸಾಧ್ಯ. ಬ್ರೇಕ್ ಅಪ್ಲೈ ಮಾಡಿದಾಗ ಕೀರಲು ಧ್ವನಿ ಬರುತ್ತಿದೆಯೇ, ಕಾರು ನೂರರ ಸ್ಪೀಡಿನಿಂದ ಸಂಪೂರ್ಣ ನಿಲ್ಲಲ್ಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ, ಡಿಸ್ಕ್ ಬ್ರೇಕ್ ಇದ್ದರೆ ಡಿಸ್ಕ್ ಮೇಲೆ ಸ್ಕೋರಿಂಗ್ ಮಾರ್ಕ್ಸ್ ಇದೆಯೇ ಎಂಬುದನ್ನು ಪರೀಕ್ಷಿಸಿ.

ಇಲೆಕ್ಟ್ರಿಕ್ ಸಮಸ್ಯೆಗಳು ಮತ್ತು ಟ್ರಾನ್ಸ್ ಮಿಷನ್ ಸಮಸ್ಯೆಗಳು

ಕಾರಿನ ದೀಪಗಳು ಅಥವಾ ಹಾರ್ನ್ ಅನಿಯಮಿತ ವಾಗಿ ಕೆಲಸ ಮಾಡುತ್ತಿದ್ದರೆ ಕಾರಿನ ಎಲೆಕ್ಟ್ರಿಕ್ ಸರ್ಕ್ಯುಟ್ ನಲ್ಲಿ ಸಮಸ್ಯೆ ಇದೆ ಎಂದರ್ಥ ಇದನ್ನು ಪರೀಕ್ಷಿಸಿ. ಅದೇ ರೀತಿ ಗೇರ್ ಶಿಪ್ಟ್ ಮಾಡುವಾಗ ಸಮಸ್ಯೆಗಳು ಇದ್ದರೆ ಅಥವಾ ಗೇರ್ ಶಿಫ್ಟ್ ಮಾಡುವಾಗ ಸದ್ದು ಬರುತ್ತಿದ್ದರೆ ಟ್ರಾನ್ಸ್ ಮಿಷನ್ ಸಮಸ್ಯೆ ಇದೆಯೇ ಎಂದು ಪರೀಕ್ಷಿಸಿಕೊಳ್ಳಿ.

Comments are closed.