Gruhalakshmi Scheme: ಬರೋಬ್ಬರಿ 10 ಲಕ್ಷ ಮಹಿಳೆಯರಿಗಿಲ್ಲ ಗೃಹಲಕ್ಷ್ಮಿ ಭಾಗ್ಯ; ಕಾರಣ ಇದೇ ಎಂದ ಸಚಿವರು!

Gruhalakshmi Scheme ರಾಜ್ಯ ಸರ್ಕಾರವು ಜಾರಿಗೆ ತಂದಿರುವ ಮಹಾತ್ವಾಕಾಂಕ್ಷಿ ಯೋಜನೆಗಳಲ್ಲಿ ಮನೆಯ ಯಜಮಾನಿಗೆ ಪ್ರತಿ ತಿಂಗಳು 2೦೦೦ ರೂ. ನೀಡುವ ಗೃಹಲಕ್ಷ್ಮಿ ಯೋಜನೆಯೂ ಒಂದಾಗಿದೆ. ಈ ಯೋಜನೆಗೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ರಕ್ಷಾಬಂಧನದ ಶುಭ ಸಂದರ್ಬದಲ್ಲಿ ಮೈಸೂರಿನಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಚಾಲನೆ ನೀಡಿದರು. ಆದರೆ ಈ ಯೋಜನೆ ಜಾರಿಯಾದಾಗಿನಿಂದಲೂ ಒಂದೆಲ್ಲ ಒಂದು ಸಮಸ್ಯೆ ಕಾಡುತ್ತಿದೆ. ಇದುವರೆಗೂ ಎಲ್ಲ ಅರ್ಹ ಫಲಾನುಭವಿಗಳಿಗೆ ಯೋಜನೆ ತಲುಪಿಸಲು ರಾಜ್ಯ ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಈಗ ಬಂದಿರುವ ಮಾಹಿತಿ ಪ್ರಕಾರ ಬರೋಬ್ಬರಿ 1೦ ಲಕ್ಷ ಜನರು ಈ ಗೃಹಲಕ್ಷ್ಮಿ ಯೋಜನೆ ಸೌಲಭ್ಯದಿಂದ ವಂಚಿತರಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಬೇಸತ್ತು ಹೋದ ಅರ್ಜಿದಾರರು:

ಗೃಹಲಕ್ಷ್ಮಿ ಯೋಜನೆಯ ಲಾಭ ಪಡೆಯಲು ಮನೆಯ ಯಜಮಾನಿ ಆದವಳು ಮೊದಲು ಗ್ರಾಮ ಒನ್, ಕರ್ನಾಟಕ ಒನ್ ಕೇಂದ್ರಗಳಿಗೆ ತೆರಳಿ ಅಲ್ಲಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಅನೇಕ ಮಹಿಳೆಯರು ಇದೇ ರೀತಿಯಾಗಿ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ಸ್ವಿಕೃತವಾದ ಸಂದೇಶವೂ ಬಂದಿದೆ. ಆದರೂ ಅವರ ಖಾತೆಗೆ ಹಣ ಜಮಾ ಆಗಿಲ್ಲ. ಇದರಿಂದ ಫಲಾನುಭವಿಗಳು ಚಿಂತಿಗೀಡಾಗಿದ್ದು, ಯಾವ ಕಾರಣದಿಂದ ನಮ್ಮ ಖಾತೆಗೆ ಹಣ ಜಮಾ ಆಗಿಲ್ಲ ಎಂದು ಚಿಂತಿಸುತ್ತಿದ್ದಾರೆ. ವಾರಕ್ಕೊಮ್ಮೆ ತಾವು ಅರ್ಜಿ ಸಲ್ಲಿಸಿದ ಕೇಂದ್ರಗಳಿಗೆ ತೆರಳಿ ವಿಚಾರಿಸುತ್ತಿದ್ದಾರೆ. ಹೀಗೆ ಅರ್ಜಿದಾರರು ಮನೆಗೂ, ಸೇವಾ ಕೇಂದ್ರಕ್ಕೂ ತಿರುಗಿ ತಿರುಗಿ ಬೇಸತ್ತು ಹೋಗಿದ್ದು, ರಾಜ್ಯ ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.

9,44,155 ಜನರಿಗೆ ಬಂದಿಲ್ಲ ಗೃಹಲಕ್ಷ್ಮಿ ಹಣ:

ಗೃಹಲಕ್ಷ್ಮಿ ಯೋಜನೆಯಡಿ ಅರ್ಜಿ ಸಲ್ಲಿಸಿದವರ ಪೈಕಿ ಇಲ್ಲಿಯವರೆಗೆ 9,44,155  ಜನರಿಗೆ ಹಣ ಜಮಾ ಮಾಡಲು ಸಾಧ್ಯವಾಗಿಲ್ಲ ಎಂದು ತಿಳಿದುಬಂದಿದೆ. ಅರ್ಜಿ ಸಲ್ಲಿಸಿದವರಲ್ಲಿ 3೦82 ಜನರು ಮೃತಪಟ್ಟಿದ್ದು, ಅವರ ಹೆಸರಲ್ಲಿಯೂ ಅರ್ಜಿ ಸಲ್ಲಿಕೆ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಅಂತಹ ಅರ್ಜಿಗಳನ್ನು ಗುರುತಿಸಿ ಅನರ್ಹಗೊಳಿಸಲಾಗಿದೆ.

ಇನ್ನು 1,59,356 ಅರ್ಜಿದಾರರ ಬ್ಯಾಂಕ್ ಖಾತೆ ಹಾಗೂ ಆಧಾರ್ ಕಾರ್ಡ್ನಲ್ಲಿ ನೀಡಲಾದ ಹೆಸರಿಗೂ ವ್ಯತ್ಯಾಸ ಕಂಡುಬಂದಿದೆ. ಇನ್ನು 5,96,268 ಅರ್ಜಿದಾರರು ತಮ್ಮ ಬ್ಯಾಂಕ್ ಖಾತೆಯನ್ನು ಆಧಾರ್ನೊಂದಿಗೆ ಲಿಂಕ್ ಮಾಡಿಲ್ಲ. ಇನ್ನು ಅರ್ಜಿದಾರರಲ್ಲಿ 1,75,683 ಹೆಸರು, ವಿಳಾಸದಲ್ಲಿ ವ್ಯತ್ಯಾಸ ಕಂಡುಬಂದಿದೆ. ಈ ಕಾರಣಕ್ಕಾಗಿ ಈ ಎಲ್ಲ ಫಲಾನುಭವಿಗಳ ಖಾತೆಗೆ ಹಣ ಜಮಾ ಆಗಿಲ್ಲ.

ಹೀಗೆ ನಾನಾ ಕಾರಣಗಳಿಂದ ಸುಮಾರು ಹತ್ತು ಲಕ್ಷ ಜನರ ಖಾತೆಗೆ ಹಣ ಜಮಾ ಮಾಡಲು ಸಾಧ್ಯವಾಗಿಲ್ಲ. ಇನ್ನು ಹಲವು ಮಹಿಳೆಯರು ಸಲ್ಲಿಸಿದ ಅರ್ಜಿಯಲ್ಲಿ ಯಾವುದೇ ದೋಷ ಇಲ್ಲದಿದ್ದರೂ ಹಣ ಜಮಾ ಆಗಿಲ್ಲ. ಇದಕ್ಕೆ ರಾಜ್ಯ ಸರ್ಕಾರ ಯಾವ ರೀತಿ ಸ್ಪಷ್ಟನೆ ನೀಡುತ್ತದೆ ಎಂದು ಕಾದು ನೋಡಬೇಕಾಗಿದೆ.

Comments are closed.